
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಜ್ವರದ ಕಾರಣ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಸ್ಪತ್ರೆಯಿಂದಲೇ ಚುನಾವಣಾ ಕಾರ್ಯತಂತ್ರ ಆರಂಭಿಸಿದ್ದಾರೆ.
ಶನಿವಾರ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ತಮ್ಮ ಆಪ್ತರನ್ನು ಕರೆದು ಚುನಾವಣಾ ವೇಳಾಪಟ್ಟಿ ಬಗ್ಗೆ ಚರ್ಚಿಸಿರುವ ಕುಮಾರಸ್ವಾಮಿ ಇದೇ ತಿಂಗಳ 28ರಿಂದ ಬೀದರ್ ಮೂಲಕ ಚುನಾವಣಾ ಪ್ರಚಾರ ಆರಂಭಿಸುವ ಬಗ್ಗೆ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ತೀವ್ರ ಜ್ವರ ಬಾಧೆಯನ್ನೂ ಲೆಕ್ಕಿಸದೆ ತಮ್ಮ ಚುನಾವಣಾ ಕಾರ್ಯತಂತ್ರಗಳನ್ನು ಹೆಣೆಯುತ್ತಿರುವ ಕುಮಾರಸ್ವಾಮಿ, ಈಗಾಗಲೇ ತಮ್ಮ ಆಪ್ತರೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ಪ್ರಚಾರ ಕಾರ್ಯ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಿದ್ದಲ್ಲದೆ ಅಲ್ಲಿಂದಲೇ ಮತದಾರರನ್ನೂ ಸಂಪರ್ಕಿಸುವಲ್ಲಿ ತೊಡಗಿದ್ದಾರೆ.
ಏತನ್ಮಧ್ಯೆ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಆಸ್ಪತ್ರೆಗೆ ತೆರಳಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.