ನಾಮಪತ್ರ ಸಲ್ಲಿಕೆ ಮುನ್ನಾ ದಿನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ; ಮಂಗಳವಾರ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿರುವ ಶಾಸಕಿ ಲಕ್ಷ್ಮೀ ಹೆಬ್ಬಳಕರ್, ಸೋಮವಾರ ಚಿಕ್ಕಹಟ್ಟಿಹೊಳಿ ಮನೆಯ ಆರಾಧ್ಯದೈವ ಶ್ರೀ ವೀರಭದ್ರ ದೇವರ ಸನ್ನಿಧಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು.
ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ತೆರಳಿದ ಅವರು, ನಾಮಪತ್ರಕ್ಕೆ ಸಂಬಂಧಿಸಿದ ಕಾಗದಪತ್ರಗಳಿಗೂ ಪೂಜೆ ಮಾಡಿಸಿ, ದೇವರ ಎದುರು ಹಸ್ತಾಕ್ಷರ ಹಾಕಿದರು.
ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ನಾವು ಮನೆ ದೇವರಿಗೆ ಪೂಜೆ ಸಲ್ಲಿಸಿ ಆಶಿರ್ವಾದ ಪಡೆಯುವುದು ವಾಡಿಕೆ. ಹಾಗಾಗಿ ಇಂದು ಮನೆಯ ಆರಾಧ್ಯದೈವ ಶ್ರೀ ವೀರಭದ್ರ ದೇವರ ಸನ್ನಿಧಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದ್ದೇನೆ. ದೇವರ ಆಶಿರ್ವಾದ ಪಡೆದಿದ್ದೇನೆ. ಮಂಗಳವಾರ ಬೆಂಬಲಿಗರ ಸಾಕ್ಷಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.
ಮಂಗಳವಾರ ಬೆಳಗ್ಗೆ ಹಿಂಡಲಗಾ ಗಣಪತಿ ಹಾಗೂ ಸುಳೇಬಾವಿಯ ಮಹಾಲಕ್ಷ್ಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ತೆರಳಿ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ