*41 ಕೋಟಿ ವೆಚ್ಚದಲ್ಲಿ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ವಿಶ್ವಾಸ ವೈದ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ಪಟ್ಟಣದ ಗಾಂಧಿ ಚೌಕ್ನಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (KUIDFC) ಹಾಗೂ ಸವದತ್ತಿ ಯಲ್ಲಮ್ಮ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಒಳಚರಂಡಿ ಯೋಜನೆಯ ಅಭಿವೃದ್ಧಿ ಹಾಗೂ ಉನ್ನತೀಕರಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು.
“ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ” ಎಂಬ ಧ್ಯೇಯದೊಂದಿಗೆ ಕೈಗೆತ್ತಿಕೊಳ್ಳಲಾದ ಈ ಮಹತ್ವಾಕಾಂಕ್ಷಿ ಯೋಜನೆಯು ಎನ್.ಜಿ.ಟಿ (NGT) ಹಾಗೂ ಎಸ್.ಬಿ.ಎಂ 2.0 (ನಗರ) ಮಾರ್ಗಸೂಚಿಗಳ ಅಡಿಯಲ್ಲಿ ಸುಮಾರು ರೂ. 41 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಯಡಿ ಪಟ್ಟಣದ ಒಳಚರಂಡಿ ಜಾಲದ ವಿಸ್ತರಣೆ, ನವೀಕರಣ, ತಾಂತ್ರಿಕ ಮಟ್ಟದ ಸುಧಾರಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.
ಸಿ.ವಿ.ಕೆ ಕನ್ಸ್ಟ್ರಕ್ಷನ್ಸ್ ಪ್ರೈ. ಲಿ. ಸಂಸ್ಥೆಯ ಮೂಲಕ ಡಿ.ಬಿ.ಒ.ಟಿ (DBOT) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಿರುವ ಈ ಬೃಹತ್ ಕಾಮಗಾರಿಯು ಐದು ವರ್ಷಗಳ ಕಾಲ ಗುತ್ತಿಗೆದಾರರ ನಿರ್ವಹಣೆಯಲ್ಲಿದ್ದು, ಪರಿಣಾಮಕಾರಿ ಕಾರ್ಯಪದ್ಧತಿಯ ಮೂಲಕ ಪಟ್ಟಣದ ನೈರ್ಮಲ್ಯ, ಆರೋಗ್ಯ ಮತ್ತು ಮೂಲಸೌಕರ್ಯಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರ ಪರಿಣಾಮವಾಗಿ ಸವದತ್ತಿ ಪಟ್ಟಣದ ಸಮಗ್ರ ಸುಸ್ಥಿರ ಅಭಿವೃದ್ಧಿಗೆ ನೂತನ ದಿಕ್ಕು ಸಿಗುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಪರಮ ಪೂಜ್ಯರು, ಸ್ಥಳೀಯ ಮುಖಂಡರು, ಗಣ್ಯರು, ಗುರುಹಿರಿಯರು, ಅಧಿಕಾರಿಗಳು, ಯುವಮಿತ್ರರು ಹಾಗೂ ನಾಗರಿಕರು ಉಪಸ್ಥಿತರಿದ್ದು.




