Kannada NewsLatest

ಇನ್ಮುಂದೆ ಸರ್ಕಾರಿ ಇಲಾಖೆಯ ಪತ್ರ ವ್ಯವಹಾರ ಕನ್ನಡದಲ್ಲಿಯೇ ಇರಬೇಕು; ಡಾ.ಟಿ.ಎಸ್.ನಾಗಾಭರಣ ಖಡಕ್ ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಗಡಿ ಭಾಗದ ಗ್ರಾಮ ಪಂಚಾಯತ್ ಗಳಲ್ಲಿ ಸರ್ಕಾರಿ ಪತ್ರ ವ್ಯವಹಾರಗಳು ಕನ್ನಡ ಭಾಷೆಯಲ್ಲಿಯೇ ಆಗಬೇಕು. ಈ ಕುರಿತು ಜಿಲ್ಲಾ ಪಂಚಾಯತ್ ಸಿ.ಇ.ಓ ಜೊತೆ ಚರ್ಚೆ ನಡೆಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಾಭರಣ ಹೇಳಿದರು.

ನಗರದ ಅತಿಥಿ ಗೃಹದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೂಲ ಉದ್ದೇಶ ರಾಜ್ಯದಲ್ಲಿ ಕನ್ನಡದಲ್ಲಿ ಆಡಳಿತ ವ್ಯವಹಾರ ನಡೆಯುವಂತೆ ನೋಡಿಕೊಳ್ಳುವುದಾಗಿದೆ. ಗಡಿ ಭಾಗದಲ್ಲಿ ಆಗುತ್ತಿರುವ ಭಾಷಾ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರಿ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರಗಳು ಆಗುತ್ತಿವೆ ಎಂದು ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ 1 ನೇ ತರಗತಿಯಿಂದ 8 ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆ ಕನ್ನಡವನ್ನು ಪ್ರಥಮ ಭಾಷೆಯಾಗಿ ವಿದ್ಯಾಭ್ಯಾಸ ಮಾಡಬೇಕಿದೆ. ನಂತರ ಮಕ್ಕಳಿಗೆ ಇಷ್ಟವಾದ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯಬಹುದು. ಡಿಗ್ರಿ ವಿಭಾಗದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು, ಆದರೆ ಯಾವುದೇ ಶಿಕ್ಷಣ ಸಂಸ್ಥೆಯವರು ಕನ್ನಡವನ್ನು ಬದಿಗೊತ್ತಿ ಬೇರೆ ಭಾಷೆಯನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುವಂತಿಲ್ಲ ಎಂದರು.

ಗಡಿ ಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಬೇರೆ ಭಾಷೆಯನ್ನು ತೆಗೆದುಕೊಳ್ಳಲು ಒತ್ತಾಯ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂದಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಶಿಕ್ಷಣದಲ್ಲಿ ಕನ್ನಡ ಭಾಷೆ ವಿಚಾರವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಶಿಸ್ತಿನ ಕ್ರಮ ತೆಗೆದುಕೊಳ್ಳವಂತೆ ಮಾಡುವುದಾಗಿ ಹೇಳಿದರು.

Home add -Advt

ಕನ್ನಡ ಬಾವುಟ ಹಾರಿಸುವ, ಕನ್ನಡ ನಾಮಪಲಕಗಳ ಬಳಕೆ ವಿಚಾರವಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆ ಹಾಗೂ ಶಿಕ್ಷಣ ವಿಷಯಕ್ಕೆ ಸಂಬಂದಿಸಿದಂತೆ ಸಾರಿಗೆ ಸೌಲಭ್ಯ ವಿಚಾರವಾಗಿ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳು ನೀಡಿದ ಕನ್ನಡ ಭಾಷೆ ಅನುಷ್ಠಾನ ಕುರಿತ ಸಮಸ್ಯೆಗಳನ್ನು ಸೋಮವಾರ(ಜು.18) ರಂದು ನಡೆಯುವ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ.ಎಸ್. ನಾಗಾಭರಣ ಸಭೆಯಲ್ಲಿ ಹೇಳಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಎನ್.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರ, ಸದಸ್ಯರು ಉಪಸ್ಥಿತರಿದ್ದರು.

Related Articles

Back to top button