ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ತಕ್ಷಣ ಸ್ಪಂದಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ (ಜೂ.೨೪) ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್ ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ವಿವರಿಸಿ, ಶಾಶ್ವತ ಪರಿಹಾರಕ್ಕೆ ಮತ್ತು ತುರ್ತು ಸ್ಪಂದನೆಗೆ ಒತ್ತಾಯಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲೆಯಲ್ಲಿ ಅನೇಕ ಜಲಮೂಲಗಳು ಬತ್ತಿ ಹೋಗಿವೆ. ಅದೇ ರೀತಿ ಕೊಳವೆಬಾವಿಗಳೂ ಕೂಡ ಬತ್ತಿ ಹೋಗಿದ್ದು, ಜಿಲ್ಲೆಯನ್ನು ಬರ ನಿರೋಧಕ ಮಾಡಬೇಕಾದರೆ ಈಗಿರುವ ಜಲಮೂಲಗಳನ್ನು ಬಳಸಿಕೊಂಡು ಎನ್‌ಆರ್‌ಡಿಡಬ್ಲುಪಿ ಅಡಿಯಲ್ಲಿ ಶಾಶ್ವತ ಪರಿಹಾರ ಕಂಡುಹಿಡಿಯಲು ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಜಿಲ್ಲೆಯಲ್ಲಿ ಪ್ರತಿವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ಶಾಶ್ವತ ಯೋಜನೆಯನ್ನು ರೂಪಿಸಿ ಕೊಳವೆಬಾವಿ ಮತ್ತು ಪೈಪ್‌ಲೈನ್‌ಗಳಿಗೆ ಕೊನೆಯ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಬಾಕಿ ಕಾಮಗಾರಿ- ಪೂರ್ಣಗೊಳಿಸಲು ಸೂಚನೆ:
ಕುಡಿಯುವ ನೀರಿನ ಯೋಜನೆಗಳ ಬಾಕಿ ಉಳಿದ(ಮುಂದುವರಿದ) ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಸರ್ಕಾರ ನಿರ್ದೇಶನ ನೀಡಿದೆ. ಆದ್ದರಿಂದ ಹಳೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಡಾ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಅವರೇ ನಿರ್ಧರಿಸಲು ಗ್ರಾಮ ಮಟ್ಟದ ನೀರು-ನೈರ್ಮಲ್ಯ ಸಮಿತಿಯಲ್ಲಿ ಚರ್ಚಿಸಿ, ನಿರ್ಧರಿಸಿದ ಬಳಿಕ ಜಿಲ್ಲಾ ಪಂಚಾಯತ ಹಂತದಲ್ಲಿ ಅನುಮೋದನೆ ನೀಡಲಾಗುವುದು.
ಓವರ್ ಹೆಡ್ ಟ್ಯಾಂಕ್-ಸಮಗ್ರ ವರದಿಗೆ ಸೂಚನೆ:
ಜಿಲ್ಲೆಯಲ್ಲಿ ಕೆಡವಬೇಕಾಗಿರುವ ಓವರ್ ಹೆಡ್ ಟ್ಯಾಂಕ್ ಗಳನ್ನು ಸಮೀಕ್ಷೆ ಮಾಡಿ ಎರಡು ವಾರದಲ್ಲಿ ವರದಿ ನೀಡಬೇಕು. ಅದೇ ರೀತಿ ಈಗಾಗಲೇ ನಿರ್ಮಾಣಗೊಂಡು ಬಳಕೆ ಮಾಡದಿರುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ವರದಿ ನೀಡಬೇಕು ಎಂದು ಜಿಪಂ ಸಿಇಓ ಡಾ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಓವರ್ ಹೆಡ್ ಟ್ಯಾಂಕ್ ಗಳನ್ನು ಕೆಡವಲು ಬೇಕಾದ ಸಂಪನ್ಮೂಲ ಗ್ರಾಮ ಪಂಚಾಯತಿ ಬಳಿ ಇಲ್ಲದಿರುವುದರಿಂದ ಜಿಲ್ಲಾ ಪಂಚಾಯತ ವತಿಯಿಂದ ಇದನ್ನು ಕೈಗೊಳ್ಳಬೇಕು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಸಲಹೆ ನೀಡಿದರು.
ಈಗಾಗಲೇ ನಿರ್ಮಾಣಗೊಂಡು ಜನರ ಬಳಕೆಗೆ ಸಾಧ್ಯವಾಗದಿರುವ ಟ್ಯಾಂಕ್ ಗಳ ಬಗ್ಗೆಯೂ ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅನುದಾನ ಸಮಾನ ಹಂಚಿಕೆಗೆ ಸಲಹೆ:
ಬೈಲಹೊಂಗಲ ತಾಲ್ಲೂಕಿಗೆ ನಿಗದಿಪಡಿಸುವ ಅನುದಾನವನ್ನು ಕಿತ್ತೂರು ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಸಮಾನವಾಗಿ ಹಂಚಿಕೆಯಾಗುವ ರೀತಿಯಲ್ಲಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಅವರು ಸಲಹೆ ನೀಡಿದರು.
ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಜಿಲ್ಲೆಗೆ ಒಟ್ಟು ೯೮.೨೫ ಕೋಟಿ ನಿಗದಿ:
ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ೨೦೧೯-೨೦ ನೇ ಸಾಲಿಗೆ ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗಗಳಿಗೆ ಒಟ್ಟಾರೆ ೯೩.೨೫ ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ.
ಬೆಳಗಾವಿ ವಿಭಾಗಕ್ಕೆ ೪೭.೦೩ ಹಾಗೂ ಚಿಕ್ಕೋಡಿ ವಿಭಾಗಕ್ಕೆ ೫೧.೦೨ ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ನಿಗದಿಪಡಿಸಿರುತ್ತದೆ.
ಏಕ ಗ್ರಾಮ ಯೋಜನೆ, ಬಹುಗ್ರಾಮ ಯೋಜನೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಯಡಿ ಬೆಳಗಾವಿ ವಿಭಾಗದಲ್ಲಿ ಈಗಾಗಲೇ ಕೆಲಸ ಚಾಲ್ತಿಯಲ್ಲಿರುವ ೧೩೨ ಹಳೆ ಕಾಮಗಾರಿಗಳಿಗೆ ೧೩.೭೫ ಕೋಟಿ ಮತ್ತು ಹೊಸ ಕಾಮಗಾರಿಗಳಿಗೆ ೩೩.೭೫ ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಲಾಗಿದೆ.
ಅದೇ ರೀತಿ ಚಿಕ್ಕೋಡಿ ವಿಭಾಗದಲ್ಲಿ ೫೫೧ ಹಳೆ ಕಾಮಗಾರಿಗಳಿಗೆ ೨೯.೫೫ ಕೋಟಿ ಮತ್ತು ಹೊಸ ಕಾಮಗಾರಿ ಕೈಗೊಳ್ಳಲು ೨೧.೪೭ ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಂಕರ ಮಾಡಲಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಮೇಶ್ ಗೋರಲ ಅವರು ತಮ್ಮ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಸಭೆಗೆ ಗಮನಕ್ಕೆ ತರುವುದರ ಜತೆಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡುವಂತೆ ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ