ಸ್ವಚ್ಛಮೇವ ಜಯತೇ ಜಾಗೃತಿ ಸಂಚಾರಿ ವಾಹನಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಗ್ರಾಮೀಣ ಪ್ರದೇಶದಲ್ಲಿರುವ ಮೂಲ ಸೌಕರ್ಯಗಳ ಕೊರತೆಯನ್ನು ಹೋಗಲಾಡಿಸಿ ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಾದ ಕೆ.ಎಸ್ ಈಶ್ವರಪ್ಪ ಅವರು ಹೇಳಿದರು.
ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಲಾ ಜಾಥಾ ವಿಶೇಷ ಪ್ರಚಾರ ಕಾರ್ಯಕ್ರಮಕ್ಕೆ ಸೋಮವಾರ(ಸೆ.೯) ಸುವರ್ಣ ವಿಧಾನಸೌಧದ ಆವರಣದಲ್ಲಿ ಹಸಿರು ನಿಶಾನೆ ತೋರಿದ ಬಳಿಕ ಅವರು ಮಾತನಾಡಿದರು.
ಸಾರ್ವಜನಿಕ ಪ್ರದೇಶಗಳಲ್ಲಿ ಕಸವನ್ನು ಎಸೆಯಬಾರದು. ಅನೈರ್ಮಲ್ಯದಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಆದರಿಂದ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
ಸ್ವಚ್ಛ ಭಾರತ ಆಂದೋಲನ ಮೂಲಕ ಇಡೀ ದೇಶದಲ್ಲಿ ನೈರ್ಮಲ್ಯತೆ ತರಲು ಮಾನ್ಯ ಪ್ರಧಾನಮಂತ್ರಿ ಹಮ್ಮಿಕೊಂಡಿದ್ದಾರೆ.
ರಾಜ್ಯದಲ್ಲಿ ಕೂಡ ಅವರ ಆಶಯಕ್ಕೆ ಅನುಗುಣವಾಗಿ ನೈರ್ಮಲ್ಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಕಲಾವಿದರು ಮನಮುಟ್ಟುವಂತೆ ಜಾಗೃತಿ ಗೀತೆ ಮೂಲಕ ಸ್ವಚ್ಛತೆ ಯ ಕುರಿತು ಅರಿವು ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸೆಪ್ಟೆಂಬರ್ ೧೧ ರಿಂದ ಅಕ್ಟೋಬರ್ ೧೨ ರ ವರೆಗೆ ಪ್ರತಿ ಗ್ರಾಮಗಳಿಗೆ ಸ್ವಚ್ಛಮೇವ ಜಯತೆ ಸಂಚಾರಿ ವಾಹನದ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಡಾ.ಆರ್.ವಿಶಾಲ್, ರಾಜ್ಯದ ಆಯ್ದ ಗ್ರಾಮಗಳಲ್ಲಿ ೨೦೦೦ ಸಾವಿರ ಪ್ರದರ್ಶನಗಳು ಆಯೋಜಿಸಲಾಗುತ್ತಿದ್ದು, ಒಂದು ವಾಹನ ದಿನಕ್ಕೆ ಎರಡು ಗ್ರಾಮದಲ್ಲಿ ಸಂಚಾರ ಕೈಗೊಂಡು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.
ನೈರ್ಮಲ್ಯದ ಮಹತ್ವ ಸಾರುವ ಮಾಹಿತಿ:
ಗ್ರಾಮಗಳಲ್ಲಿರುವ ಶಾಲೆಗಳು ಅಭಿವೃದ್ಧಿಯಾಗಬೇಕು ಹಾಗೂ ಪ್ರತಿ ಗ್ರಾಮಗಳಲ್ಲಿಯೂ ಸಹ ಸ್ವಚ್ಛ ಕುಡಿಯುವ ನೀರು ಹೊಂದಿರಬೇಕು, ಸ್ವಚ್ಛತೆಯ ಜವಾಬ್ದಾರಿ ನಿಮ್ಮದು ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಸ್ವಚ್ಛತೆಯಲ್ಲಿ ಕರ್ನಾಟಕಕ್ಕೆ ಸಿಗಲಿ ಅಗ್ರಸ್ಥಾನ, ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ರಕ್ಷಿಸಿ, ನಿಮ್ಮಲ್ಲಿ ಶೌಚಾಲಯ ಇಲ್ಲವೇ? ಈಗಲೇ ಕಟ್ಟಿಸಿ, ನಾವು ನಾವು ನಿಮಗೆ ಸಹಾಯ ನೀಡುತ್ತವೆ, ಬಯಲಲ್ಲಿ ಬೇಡ ಪ್ರತಿ ದಿನ ಶೌಚಾಲಯವನ್ನೇ ಬಳಸಿ ಎಂಬುದು ಸೇರಿದಂತೆ ವಿವಿಧ ಬಗೆಯ ಜಾಗೃತಿ ವಾಕ್ಯಗಳು ಮತ್ತು ನೈರ್ಮಲ್ಯ ಕುರಿತ ಮಾಹಿತಿಯನ್ನು ಪ್ರಚಾರ ವಾಹನದಲ್ಲಿ ಅಳವಡಿಸಲಾಗಿದೆ.
ಶೌಚಾಲಯ ಬಳಕೆ, ಕಸ ವಿಲೇವಾರಿ ಕುರಿತು ಜಾಗೃತಿ ಗೀತೆಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಂಚಾರಿ ಕಲಾಜಾಥಾ ವಾಹನಗಳ ಮೂಲಕ ನಡೆಸಲಾಗುತ್ತಿದೆ.
ರಾಯಬಾಗ ತಾಲ್ಲೂಕಿನ ಚಿಂಚಲಿಯ ಡಾ.ಬಿ.ಆರ್.ಅಂಬೇಡ್ಕರ್ ಜಾನಪದ ಪೋಷಕರ ಸಂಘ ಹಾಗೂ ಅಂಬೇಡ್ಕರ್ ಸಾಂಸ್ಕೃತಿಕ ಯುವ ನಾಟಕ ಕಲಾ ಸಂಘದ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ