ಪ್ರಗತಿವಾಹಿನಿ ಸುದ್ದಿ; ಮೈಸೂರು: ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದ್ದು, ಹೋಟೆಲ್ ಬಿಟ್ಟು ಹೋಗುವಂತೆ ಧಮ್ಕಿ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನಲ್ಲಿರುವ ’ಕೇಸರಿ’ ರೆಸ್ಟೋರೆಂಟ್ ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಹಿಳೆಯ ಮೇಲೆ ರಿಯಾಜ್ ಅಹ್ಮದ್ ಎಂಬಾತ ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊಹಮ್ಮದ್ ನಲಪಾಡ್ ಅವರಿಗೆ ಸೇರಿದ ರೆಸ್ಟೋರೆಂಟ್ ಇದಾಗಿದ್ದು, ಕೃತ್ತಿಕಾ ಗೌಡ ಎಂಬ ಮಹಿಳೆ ಈ ರೆಸ್ಟೋರೆಂಟ್ ನ್ನು ಮೂರು ವರ್ಷ ಅಗ್ರಿಮೆಂಟ್ ಗೆ ಪಡೆದು ನಡೆಸುತ್ತಿದ್ದರು. ರೆಸ್ಟೋರೆಂಟ್ ನ ಉಸ್ತುವಾರಿ ವಹಿಸಿದ್ದ ರಿಯಾಜ್ ಅಹ್ಮದ್ ಎಂಬುವವರು ರೆಸ್ಟೋರೆಂಟ್ ಗೆ ನುಗ್ಗಿ ಕೃತ್ತಿಕಾ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಜಾಗ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಮಹಿಳೆಯನ್ನು ಎಳೆದಾಡಿ ತಳ್ಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದ ಮಹಿಳೆ ಕೃತ್ತಿಕಾ ಗೌಡ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಲಪಾಡ್ ಅವರಿಗೆ ಸೇರಿದ ರೆಸ್ಟೋರೆಂಟ್ ನ್ನು ತಾನು 20 ಲಕ್ಷಕ್ಕೆ ಮೂರು ವರ್ಷ ಅಗ್ರಿಮೆಂಟ್ ಗೆ ಪಡೆದು ನಡೆಸುತ್ತಿದ್ದು, ಈಗ ಕೇವಲ ಒಂದು ವರ್ಷಕ್ಕೆ ಜಾಗ ಖಾಲಿ ಮಾಡುವಂತೆ ತನ್ನ ಮೇಲೆ ಹಲೆ ನಡೆಸಲಾಗಿದೆ. ಫೋನ್ ಮಾಡಿ ಧಮ್ಕಿ ಹಾಕುತ್ತಿದ್ದಾರೆ. ಹೋಟೆಲ್ ಗೆ ನುಗ್ಗಿ ರಿಯಾಜ್ ಎಂಬಾತ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ನಾನು ಹಿಂದೂ ಮಹಿಳೆ ಎಂಬ ಕಾರಣಕ್ಕೆ ಈಗ ನನ್ನ ಮೇಲೆ ಹಲ್ಲೆ ನಡೆಸಿ, ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಬಳಿ ಅಗ್ರಿಮೆಂಟ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಇವೆ. ದೌರ್ಜನ್ಯ ನಡೆಯುತ್ತಿರುವುದು ಗೊತ್ತಿದ್ದೂ ನಲಪಾಡ್ ಸುಮ್ಮನಿದ್ದಾರೆಯೇ? ಈ ಬಗ್ಗೆ ಉತ್ತರ ಕೊಡಬೇಕು. ಸಮಸ್ಯೆ ಬಗೆಹರಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ.
ಮಹಿಳೆ ಮೇಲೆ ರೆಸ್ಟೋರೆಂಟ್ ನಲ್ಲಿ ಹಲ್ಲೆ ನಡೆದ ಬಗ್ಗೆ ಮೈಸೂರಿನ ಎನ್.ಆರ್.ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ