ಗೃಹಲಕ್ಷ್ಮೀಗೆ ದುಡ್ಡು, ಉದ್ಧಟತನದ ಮಾತು; ಗ್ರಾಮ ಒನ್ ಸೀಜ್
ಪ್ರಗತಿವಾಹಿನಿ ಸುದ್ದಿ, ಅಥಣಿ: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ನೋಂದಣಿಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಮತ್ತು ಈ ಕುರಿತು ಪ್ರಶ್ನಿಸಿದವರಿಗೆ ಉದ್ಧಟತನದ ಉತ್ತರ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅಥಣಿ ತಾಲ್ಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಮೇರೆಗೆ, ಅಥಣಿ ತಹಸಿಲ್ದಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೇಂದ್ರವನ್ನು ಸೀಜ್ ಮಾಡಿದ್ದಾರೆ. ಸಂಬಂಧಿಸಿದ ವ್ಯಕ್ತಿಯ ವಿರುದ್ಧ ದೂರು ಕೂಡ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ಪ್ರತಿ ಅರ್ಜಿಗೆ 100 ರೂ ಸ್ವೀಕರಿಸುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮ ಒನ್ ಕೇಂದ್ರ ನಡೆಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಪ್ರಶ್ನಿಸಿದಾಗ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಂದರೂ ನಾನು ಹಣ ಪಡೆದೇ ಅರ್ಜಿ ಅಪ್ ಲೋಡ್ ಮಾಡುತ್ತೇನೆ ಎಂದು ಹೇಳಿದ್ದ ವೀಡಿಯೋ ವೈರಲ್ ಆಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳಕರ್, ನಾವು ಪ್ರತಿ ಅರ್ಜಿ ಅಪ್ ಲೋಡ್ ಮಾಡಲು 12 ರೂ. ನೀಡುತ್ತಿದ್ದೇವೆ. ಇದನ್ನು ಮೀರಿ ಯಾರಾದರೂ ಜನರಿಂದ ಹಣ ವಸೂಲಿಗೆ ಮುಂದಾದರೆ ಕೇಂದ್ರವನ್ನೇ ಸೀಜ್ ಮಾಡಲಾಗುವುದು. ನಿಮ್ಮ ಕೆಲಸವನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ