ಚಿಕ್ಕೋಡಿಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಬರುವ ದಿನಗಳಲ್ಲಿ ಚಿಕ್ಕೋಡಿ ಸಾರ್ವಜನಿಕ ಗ್ರಂಥಾಲಯದಲ್ಲಿ ಇ-ಲೈಬ್ರರಿ ಮಾಡುವ ಚಿಂತನೆ ಇದೆ ಎಂದು ಚಿಕ್ಕೋಡಿ ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಶನಿವಾರ ನಗರದ ಪುರಸಭೆ ಆವರಣದಲ್ಲಿ ಚಿಕ್ಕೋಡಿ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಹಳೆಯದಾಗಿದ್ದ ಸಾರ್ವಜನಿಕ ಗ್ರಂಥಾಲಯ ನೂತನ ಕಟ್ಟಡ ಕಟ್ಟಲು ಹಲವು ವ?ಗಳ ಬೇಡಿಕೆಯಾಗಿತ್ತು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕೋಡಿ ಸಾರ್ವಜನಿಕ ಗ್ರಂಥಾಲಯ ಕಟ್ಟಡಕ್ಕೆ ೪೦ ಲಕ್ಷ ರೂಗಳ ಅನುದಾನ ಮಂಜೂರಾಗಿದ್ದು ನಾಳೆಯಿಂದ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಈ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ಬಹಳ ದಿನಗಳೇ ಆಗಿತ್ತು ಆದರೆ ಸ್ಥಳಾವಕಾಶದ ಕೊರತೆಯಿಂದ ವಿಳಂಬವಾಗಿದೆ. ಹಿರಿಯ ಪುರಸಭೆ ಸದಸ್ಯ ಜಗದೀಶ ಕವಟಗಿಮಠ ಹಾಗೂ ಪುರಸಭೆ ಸದಸ್ಯರು ಸ್ಥಳವನ್ನು ಪುರಸಭೆ ಆವರಣದಲ್ಲಿಯೇ ನಿರ್ಮಿಸಿದರೇ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಸ್ತಾಪಿಸಿದರು. ಅದರಂತೆ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಬಿಜೆಪಿ ಪಕ್ಷದಲ್ಲಿ ಸ್ಪರ್ಧೆಗಿಳಿಯಲು ಹೆಚ್ಚು ಅಭ್ಯರ್ಥಿಗಳಿದ್ದರೂ ಪಕ್ಷಾತೀತವಾಗಿ ಪಕ್ಷ ಘೋಷಿಸಿದ ಅಭ್ಯರ್ಥಿಯ ಬೆನ್ನಿಗೆ ಎಲ್ಲರೂ ನಿಲ್ಲಬೇಕಿದೆ. ರಮೇಶ ಕತ್ತಿಯವರನ್ನು ಭೇಟಿಮಾಡುತ್ತೇನೆ. ಹಾಗೂ ನನ್ನ ಪ್ರಚಾರಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಬರುತ್ತಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಪುರಸಭೆ ಸದಸ್ಯರಾದ ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಸಂತೋಷ ಜೋಗಳೆ, ಸಿದ್ದಪ್ಪ ಡಂಗೇರ, ಸಂತೋಷ ತಾಂಬಳೆ, ಆದಂ ಗಣೇಶವಾಡಿ, ಮಲ್ಲಿಕಾರ್ಜುನ ಕವಟಗಿಮಠ ಸೋಮು ಗವನಾಳೆ,ದುಂಡಪ್ಪ ಬೆಂಡವಾಡೆ,ರಮೇಶ ಕಾಳನ್ನವರ,ಶಬ್ಬೀರ್ ಗೌಂಡಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ