ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ; ಕಳೆದ 9 ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡಿರುವ ಕೇಂದ್ರ ಸರ್ಕಾರದ ಅಭೂತ ಪೂರ್ವ ಸಾಧನೆಗಳನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಸಭೆ ಮಾಡಿ, ಪ್ರೊಜೆಕ್ಟರ್‌ಗಳ ಮೂಲಕ ಜನರಿಗೆ ತೋರಿಸಿ ಜನರ ಮನೆ ಮನ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಪಟ್ಟಣದ ತಮ್ಮ ಲೋಕಸಭೆ ಕಚೇರಿಯಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ” ಜೂನ್ 7 ರಿಂದ ಜೂನ್ 21 ರವರೆಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 56 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಜಿಲ್ಲಾ ಪಂಚಾಯಿತಿವಾರು ಸಭೆಗಳನ್ನು ಮಾಡಿ ಮೋದಿ ಸರ್ಕಾರದ 9 ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸಲಾಗುತ್ತದೆ. ಜೂನ್ 7 ರಂದು ಸುಕ್ಷೇತ್ರ ಯಡೂರು ಗ್ರಾಮದಿಂದ 9 ವರ್ಷಗಳ ಸಾಧನೆಯ ನೋಟವನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಾರಂಭಿಸಲಾಗುವುದು ಎಂದರು.
ಬೆಳಿಗ್ಗೆ 9ಕ್ಕೆ ಯಡೂರು, ಬೆಳಿಗ್ಗೆ 11 ಕ್ಕೆ ಕೇರೂರು , ಮಧ್ಯಾಹ್ನ 3ಕ್ಕೆ ಹಿರೇಕೋಡಿ , ಹಾಗೂ ಸಂಜೆ 5ಕ್ಕೆ ನೇಜ ಗ್ರಾಮಗಳಲ್ಲಿ ಸಾಧನೆಯ ನೋಟವನ್ನು ಪ್ರಸ್ತುತ ಪಡಿಸಲಾಗುವುದು. ಈ ಸಂದರ್ಭದಲ್ಲಿ ಆಯಾ ಕ್ಷೇತ್ರದ ಬಿಜೆಪಿ ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು, ಪಕ್ಷದ ಸ್ಥಳೀಯ ಪದಾಧಿಕಾರಿಗಳು ಸೇರಿದಂತೆ ಹಲವರ ಸಹಯೋಗದಲ್ಲಿ ಸಾಧನೆಯ ನೋಟವನ್ನು ಪ್ರಸ್ತುತ ಪಡಿಸಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುವುದು ಅತ್ಯವಶ್ಯಕವಾಗಿದೆ. ಬೃಹದಾಕಾರದ ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳನ್ನಾಗಿ ವಿಭಜಿಸುವುದು ಬೇಡ. ಚಿಕ್ಕೋಡಿ ಹಾಗೂ ಬೆಳಗಾವಿ ಹೀಗೆ ಎರಡು ಜಿಲ್ಲೆಗಳನ್ನಾಗಿ ಮಾಡಿದರೆ ಯೋಗ್ಯವಾಗುತ್ತದೆ. ಈಗಾಗಲೇ ಚಿಕ್ಕೋಡಿ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಕಚೇರಿಗಳಿದ್ದು, ಚಿಕ್ಕೋಡಿ ಜಿಲ್ಲೆಯನ್ನಾಗಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದರೆ ತಮ್ಮ ಸಹಮತ ಇದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುವ ಜೇವರ್ಗಿ-ಸಂಕೇಶ್ವರ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಮುರಗುಂಡಿಯವರೆಗೆ ಇದೀಗ ಕಾಮಗಾರಿಯು ನಡೆಯುತ್ತಿದ್ದು, ಲೋಕಸಭಾ ಚುನಾವಣೆ ಹೊತ್ತಿಗೆ ಮುರಗುಂಡಿಯಿಂದ ಗೋಟೂರ ವರೆಗೂ ಕೂಡ ಜೇವರ್ಗಿ-ಸಂಕೇಶ್ವರ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಜೊಲ್ಲೆ ಹೇಳಿದರು.
ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಚಿಂಚಣಿ, ಕಬ್ಬೂರ ಬಳಿ ಇದ್ದು, ಇವೆರಡೂ ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಇರುವುದು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಎರಡ ಪೈಕಿ ಒಂದು ಟೋಲ್ ಗೇಟ್ ರದ್ದು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುವುದು’” ಎಂದು ಸಂಸದ ಜೊಲ್ಲೆ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ ನೇರ್ಲಿ, ಮುಖಂಡ ದುಂಡಪ್ಪ ಬೆಂಡವಾಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಚಿಕ್ಕೋಡಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಬಸವರಾಜ ಡೋಣವಾಡೆ, ಸಂಜಯ ಪಾಟೀಲ ಉಪಸ್ಥಿತರಿದ್ದರು.
https://pragati.taskdun.com/caste-wise-social-and-educational-survey-reportacceptancechief-minister-siddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ