*ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಸುದ್ದಿ ತಿಳಿದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಈ ವೇಳೆ ಸಂಸದೆಗೆ ಮಾಹಿತಿ ನೀಡಿದ ವೈದ್ಯರು ಎಲ್ಲ ಮಕ್ಕಳಿಗೂ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶಿಕ್ಷಕರು ಹಾಗೂ ವಾರ್ಡನ್ ಸಿಬ್ಬಂದಿ ಮಕ್ಕಳ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕು. ಕೆಲವೇ ದಿನಗಳ ಹಿಂದೆ ಇದೇ ವಸತಿ ಶಾಲೆಯಲ್ಲಿ ಸುಮಾರು 120 ವಿದ್ಯಾರ್ಥಿಗಳು ಆಹಾರ ವಿಷಬಾಧೆಗೊಳಗಾಗಿ ಅಸ್ವಸ್ಥರಾಗಿದ್ದರು. ಆ ಘಟನೆಯ ನಂತರ ಮತ್ತೆ ಇದೇ ವಸತಿ ಶಾಲೆಯಲ್ಲಿ ಈ ಕಹಿ ಘಟನೆ ಮರುಕಳಿಸಿರುವುದು ವಿಷಾದಕರ ಎಂದ ಅವರು, ವಾರ್ಡನ್ ಹಾಗೂ ಸಿಬ್ಬಂದಿಗೆ ಈ ರೀತಿ ನಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಡುಗೆ ಕಾಳುಗಳನ್ನು ಪರಿಶೀಲಿಸಿದ ಸಂಸದೆ:
ಉತ್ತಮ ಶಿಕ್ಷಣ, ಸೌಲಭ್ಯ ಸಿಗುವ ನಂಬಿಕೆಯಿಂದ ಹೊರ ತಾಲೂಕಿನ ಮಕ್ಕಳು ಇಲ್ಲಿಗೆ ಬರುತ್ತಾರೆ. ಆದರೆ ಇಲಾಖೆಯ ಅಧಿಕಾರಿಗಳ ಬೇಜವ್ದಾರಿಯಿಂದಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ವಿದ್ಯಾಸಂಸ್ಥೆಗಳ ಮೇಲಿನ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂದ ಅವರು, ಬಳಿಕ ವಸತಿ ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟದ ಕೋಣೆಗೆ ಹೋಗಿ ಅಡುಗೆಗೆ ಬಳಸುತ್ತಿರುವ ಕಾಳಕಡಿ ಸೇರಿದಂತೆ ಕುಡಿಯುವ ನೀರಿನ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿದರು. ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಕ್ಕಳ ಹಿತ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿ ಹೇಳಿದರು.
ಈ ವೇಳೆ ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂಪಗಾವಿ, ಬುಡಾ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸೇರಿದಂತೆ ವಸತಿ ಶಾಲೆ ಪ್ರಾಚಾರ್ಯ ಹಾಗೂ ವಾರ್ಡನ್ ಸಿಬ್ಬಂದಿ ಇದ್ದರು.




