ವಿಜಯೀಭವ ಎಂದ ತಾಯಿ; ಯುವಶಕ್ತಿ ಪ್ರದರ್ಶಿಸಿದ ಮೃಣಾಲ್ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಘ್ನ ವಿನಾಶಕ ಗಣಪತಿಯ ಪೂಜೆ ಮಾಡಿ, ಯುವ ಶಕ್ತಿಯೊಂದಿಗೆ ಬೃಹತ್ ಬೈಕ್ ರ್ಯಾಲಿ ಮೂಲಕ ಮಹಾತ್ಮರ ಪುತ್ಥಳಿಗಳಿಗೆ ಗೌರವ ಮಾಲಾರ್ಪಣೆ ಮಾಡುವ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಭಾನುವಾರ ತಮ್ಮ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸಹಸ್ರಾರು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾನುವಾರ ಬೆಳಗ್ಗೆ ಹಿಂಡಲಗಾದ ಗಣಪತಿ ಮಂದಿರಕ್ಕೆ ತೆರಳಿದ ಮೃಣಾಲ ಹೆಬ್ಬಾಳಕರ್ ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದ ಸಂಪ್ರದಾಯದಂತೆ ಯಾವುದೇ ಕೆಲಸ ಮಾಡುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸುತ್ತೇವೆ. ಅದೇ ರೀತಿ ಪೂಜೆ ಮಾಡಿ, ಎಲ್ಲ ಗುರುಹಿರಿಯರ ಆಶಿರ್ವಾದದೊಂದಿಗೆ ಇಂದು ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಮ್ಮ ದೃಷ್ಟಿಯಲ್ಲಿ ಪ್ರತಿಯೊಬ್ಬ ಮತದಾರ ಕೂಡ ನಿರ್ಣಾಯಕರೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಮುನ್ನಡೆಯುತ್ತೇವೆ. ಈ ಚುನಾವಣೆಯಲ್ಲಿ ಬಹಳ ದೊಡ್ಡ ಅಂತರದಿಂದ ಗೆಲ್ಲುವುದಾಗಿ ಎಲ್ಲರೂ ವಿಶ್ವಾಸದಿಂದ ಇದ್ದೇವೆ. ತಾಯಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಮಾವ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಜಿಲ್ಲೆಯ ಎಲ್ಲ ಮುಖಂಡರ ಆಶಿರ್ವಾದ ಮತ್ತು ಮಾರ್ಗದರ್ಶನ ನನಗಿದೆ. ಕಳೆದ 10 ವರ್ಷದಿಂದ ನಾನು ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದ ಅವರು, ವಿರೋಧ ಪಕ್ಷಗಳ ಬಗ್ಗೆ ಮಾತನಾಡದೆ, ನಮ್ಮ ಕೆಲಸವನ್ನು ಮಾಡುತ್ತ ಹೋಗುತ್ತೇವೆ. ಈ ಬಾರಿ ನಮಗೆ ಉತ್ತಮ ಅವಕಾಶವಿದೆ ಎಂದರು.
ಬೇರೆಯವರ ಬಗ್ಗೆ ಯೋಚಿಸುವುದಿಲ್ಲ – ಲಕ್ಷ್ಮೀ ಹೆಬ್ಬಾಳಕರ್
ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿರೋಧ ಪಕ್ಷದವರು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಹೋಗುತ್ತೇವೆ ಎಂದರು.
ಸತೀಶ್ ಜಾರಕಿಹೊಳಿ ಬೆಳಗಾವಿ ಕ್ಷೇತ್ರದ ಉಸ್ತುವಾರಿ, ನಾನು ಚಿಕ್ಕೋಡಿ ಕ್ಷೇತ್ರದ ಉಸ್ತುವಾರಿ. ಇಬ್ಬರೂ ಪರಸ್ಪರ ಸಮನ್ವಯದಿಂದ ಕೆಲಸ ಮಾಡುತ್ತೇವೆ. ಚಿಕ್ಕೋಡಿಯಲ್ಲಿ ಅವಶ್ಯಕತೆ ಇದ್ದಾಗ ನಾನು ಅಲ್ಲಿಗೆ ಹೋಗುತ್ತೇನೆ, ಅವರ ಅವಶ್ಯಕತೆ ಇದ್ದಾಗ ಅವರು ಇಲ್ಲಿಗೆ ಬರುತ್ತಾರೆ. ಒಟ್ಟಾಗಿ ಉತ್ತಮವಾಗಿ ಕೆಲಸ ಮಾಡಿ, ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರದಲ್ಲಿ ಗೆದ್ದು ಬರುತ್ತೇವೆ ಎಂದರು.
ಕೆಲವರಿಗೆ ಅಸಮಾಧಾನ ಇರಬಹುದು. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಇಡೀ ಭಾರತವನ್ನು ಯಂಗ್ ಇಂಡಿಯಾ ಎನ್ನುತ್ತೇವೆ. ಹಾಗಾಗಿ ಯುವಕರಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಟಿಕೆಟ್ ಕೊಟ್ಟಿದ್ದೇವೆ. ಸಕಾರಾತ್ಮಕ ವಿಚಾರಗಳನ್ನಿಟ್ಟುಕೊಂಡು ಕೆಲಸ ಮಾಡುತ್ತೇವೆ. ಬೇರೆಯವರ ತಂತ್ರ, ಕುತಂತ್ರಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೆಬ್ಬಾಳಕರ್ ಹೇಳಿದರು.
ಯಾವುದೇ ಚುನಾವಣೆಯನ್ನು ನಾವು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಒತ್ತಡ ಇರುತ್ತದೆ, ಆದರೆ ಎಲ್ಲರ ಸಹಕಾರ ಇರುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಎಲ್ಲ 8 ವಿಧಾನಸಭಾ ಕ್ಷೇತ್ರದಲ್ಲೂ ಎಲ್ಲರೂ ಸೇರಿ ಪ್ರಚಾರ ಮಾಡುತ್ತೇವೆ. ಮೂರೂ ಕ್ಷೇತ್ರಗಳಲ್ಲೂ ಸಮಾನವಾಗಿ ಪ್ರಚಾರ ಮಾಡಿ ಎಲ್ಲ ಕಡೆ ಗೆಲುವು ಸಾಧಿಸುತ್ತೇವೆ. ಸಾಮಾಜಿಕ ಕಳಕಳಿ, ಬದ್ಧತೆಯಿಂದ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ. ಕೆನರಾದಲ್ಲಿ ಮರಾಠಾ ಸಮುದಾಯದ ನಾಯಕಿಗೆ, ಬೆಳಗಾವಿಯಲ್ಲಿ ಲಿಂಗಾಯತ ಯುವಕನಿಗೆ, ಚಿಕ್ಕೋಡಿಯಲ್ಲಿ ವಾಲ್ಮೀಕಿ ಸಮುದಾಯದ ಯುವತಿಗೆ ಟಿಕೆಟ್ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಪ್ರವಾಹದಲ್ಲಿ, ಕೊರೋನಾದಲ್ಲಿ ಸಹ ಕರ್ನಾಟಕಕ್ಕೆ ಸಹಾಯ ಮಾಡಿಲ್ಲ, ಕೊನೆಯ ಪಕ್ಷ ಬರಗಾಲದಲ್ಲಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈಗಲೂ ಸಹಾಯಕ್ಕೆ ಬರುತ್ತಿಲ್ಲ. ಹಾಗಾಗಿ ನಾವು ನ್ಯಾಯಾಲಯದ ಮೂಲಕ ನಮ್ಮ ಕರಾಜ್ಯದ ಜನರಿಗೆ ನ್ಯಾಯ ಕೊಡಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೆಬ್ಬಾಳಕರ್ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
ಬಿಜೆಪಿಯವರ ರಾಮ ಜಪದ ಕುರಿತು ಕೇಳಿದ ಪ್ರಶ್ನೆಗೆ, ನಾನು ಕೂಡ ರಾಮನ ಭಕ್ತಳೇ, ನಮ್ಮ ಸಂಸ್ಕೃತಿ ಬಿಡುವುದಿಲ್ಲ. ಆದರೆ ನಾನು ಅಭಿವೃದ್ಧಿ ಪರ ಚುನಾವಣೆ ಮಾಡುತ್ತೇನೆ. ಅಭಿವೃದ್ಧಿ ನೋಡಿ ಮತ ಕೊಡಿ ಎಂದು ಕೇಳುತ್ತೇನೆ. ನಮ್ಮಲ್ಲಿ ಜಾತಿಭೇದವಿಲ್ಲ, ಪ್ರಾದೇಶಿಕ ಭೇದವಿಲ್ಲ. ಎಲ್ಲರಿಗೂ ಗ್ಯಾರಂಟಿ ಯೋಜನೆಯ ಲಾಭ ನೀಡಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಯುವಶಕ್ತಿಗೆ ಕಾಂಗ್ರೆಸ್ ಶಕ್ತಿ – ಚನ್ನರಾಜ
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಯುವಶಕ್ತಿಗೆ ಶಕ್ತಿ ಕೊಡಲು ಪಕ್ಷ ಯುವಕರಿಗೆ ಆದ್ಯತೆ ನೀಡಿದೆ. ಬೆಳಗಾವಿಯ ಮೂರೂ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಮುಖ್ಯಮಂತ್ರಿಗಳು ಹೇಳಿದಂತೆ ಆಂತರಿಕ ಸರ್ವೆಯಲ್ಲಿ ಶೇ.75ರಷ್ಟು ಕುಟುಂಬದ ಯಜಮಾನಿಯರು ನಮ್ಮ ಯೋಜನೆಗಳನ್ನು ಮೆಚ್ಚಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತದೆ ಎಂದರು.
ಬಿಜೆಪಿಯಲ್ಲಿರುವ ಗೊಂದಲಗಳು ಖಂಡಿತ ನಮಗೆ ಅನುಕೂಲ ಆಗೇ ಆಗುತ್ತದೆ. ಆ ಪಕ್ಷದ ಮುಖಂಡರೇ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ನಾವು ನಮ್ಮ ಸಾಧನೆಗಳ ಮೇಲೆ ಚುನಾವಣೆ ಎದುರಿಸುತ್ತೇವೆ. ನಾನು ಬೆಳಗಾವಿ ಜೊತೆಗೆ ಚಿಕ್ಕೋಡಿ, ಕೆನರಾ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತೇನೆ ಎಂದು ಚನ್ನರಾಜ ಹೇಳಿದರು.
ನಂತರ ಅಂಬೇಡ್ಕರ್ ಗಾರ್ಡನ್ ಗೆ ತೆರಳಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಲ್ಲಿ ಮಾತನಾಡಿದ ದಲಿತ ಮುಖಂಡ ಮಲ್ಲೇಶ ಚೌಗಲೆ, ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವುದಾಗಿ ಅಂಬೇಡ್ಕರ್ ಸಮ್ಮುಖದಲ್ಲಿ ಪ್ರಮಾಣ ಮಾಡುವುದಾಗಿ ತಿಳಿಸಿದರು.
ಅಲ್ಲಿಂದ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಗೆ, ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ, ಬೋಗಾರ್ ವೇಸ್ ನಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿಗೆ, ಶಿವಾಜಿ ಗಾರ್ಡನ್ ನಲ್ಲಿ ಛತ್ರಪತಿ ಶಿವಾಜಿ ಪುತ್ಥಳಿಗೆ, ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಾಜಹಂಸಗಡಕ್ಕೆ ತೆರಳಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಯುವರಾಜ ಕದಂ, ಸುರೇಶ ಇಟಗಿ, ಅಡಿವೇಶ ಇಟಗಿ ಸೇರಿದಂತೆ ಜಿಲ್ಲೆಯ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ