ಎಂಟಿಬಿ ನಾಗರಾಜ್ ಮನವೊಲಿಕೆಯಲ್ಲಿ ಯಶಸ್ವಿಯಾದ ಸಿಎಂ?

ಪ್ರಗಾತಿವಾಹಿನಿ ಸುದ್ದಿ; ಬೆಂಗಳೂರು: ಪ್ರೆ.6ರಂದು ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲೇ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದ ಎಂಟಿಬಿ ನಾಗರಾಜ್​ ಅವರನ್ನು ಮನವೊಲಿಕೆ ಮಾಡಲಾಗಿದ್ದು, ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದ ಹಿನ್ನಲೆಯಲ್ಲಿ ಎಂಟಿಬಿ ತಣ್ಣಗಾಗಿದ್ದಾರೆ ಎನ್ನಲಾಗಿದೆ.

ಸೋತವರಿಗೆ ಸ್ಥಾನ ನೀಡಿದರೆ ಮೂಲ ಬಿಜೆಪಿಗರ ವಿರೋಧಕ್ಕೆ ಕಾರಣವಾಗಲಿದೆ ಎಂದು ಅರಿತ ಸಿಎಂ, ಗೆದ್ದವರಿಗೆ ಮಾತ್ರ ಸಚಿವ ಸ್ಥಾನದ ಭರವಸೆ ನೀಡಿದ್ದರು. ಇದು ಎಂಟಿಬಿ ನಾಗರಾಜ್​ ಹಾಗೂ ಹೆಚ್​ ವಿಶ್ವನಾಥ್​ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಂಟಿಬಿ ಮನವೊಲಿಸಿದ ಸಿಎಂ ಸಚಿವ ಸ್ಥಾನ ಬದಲು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಇದರಿಂದಾಗಿ ಎಂಟಿಬಿ ಸಿಟ್ಟು ಶಮನವಾಗಿದೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್​, ಯಡಿಯೂರಪ್ಪ ನಮ್ಮ ನಾಯಕರು ನಾವು ಅವರನ್ನು ನಂಬಿ ರಾಜೀನಾಮೆ ನೀಡಿ ಬಂದಿದ್ದೆವೆ. ಸಿಎಂ ಮಾತು ನೀಡಿದ್ದಾರೆ ಅದರಂತೆ ನಡೆದುಕೊಳ್ಳಲಿದ್ದಾರೆ. ನಮಗೆ ಸಿಎಂ ಮೇಲೆ ಯಾವುದೇ ಅನುಮಾನ ಇಲ್ಲ. ಇದುವರೆಗೂ ನಮ್ಮ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇದೊಂದು ಕೆಲಸ ಬಾಕಿ ಇದೆ, ಅದು ಕೂಡ ಶೀಘ್ರದಲ್ಲಿ ಆಗಲಿದೆ ಎಂದರು.

ಸಚಿವ ಸ್ಥಾನ ಸಿಗದ ಹಿನ್ನೆಲೆ ವಿಶ್ವನಾಥ್ ಬೇಸರದಲ್ಲಿ ಇರುವುದು ನಿಜ. ಅವರಿಗೂ ಸೂಕ್ತ ಸ್ಥಾನಮಾನ ಸಿಗಲಿದೆ. ಆದರೆ, ತಾಳ್ಮೆಯಿಂದ ಇರಬೇಕು ಅಷ್ಟೆ ಎಂದು ಹೇಳಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button