
ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿಪ್ರಾಧಿಕಾರ-ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿಸಲ್ಪಟ್ಟಿರುವ ಮೂಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ದಿನೇಶ್ ಕುಮಾರ್ ಗೆ ಸಂಕಷ್ಟ ಎದುರಾಗಿದೆ.
ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕುಮಾರ್ ಅವರನ್ನು ಇಡಿ ಅಧಿಕಾರಿಗಳು ನಿನ್ನೆ ಬಂಧಿಸಿದ್ದರು. ದಿನೇಶ್ ಕುಮಾರ್ ಅವರ ಪರ ವಕೀಲರು, ಮಧ್ಯಂತರ ಜಾಮೀನಿಗಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ದಿನೇಶ್ ಕುಮಾರ್ ಅವರಿಗೆ ಅನಾರೋಗ್ಯ ಸಮಸ್ಯೆಯಿರುವುದರಿಂದ ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ದಿನೇಶ್ ಕುಮಾರ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದೇ ವೇಳ ದಿನೇಶ್ ಕುಮಾರ್ ಅವರನ್ನು 9 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.