Kannada NewsKarnataka NewsLatest

ಸಿಂಹಗರ್ಜನೆಯಿಂದ ಕನ್ನಡಿಗರನ್ನೆಚ್ಚರಿಸಿದ ಮುದವೀಡು ಕೃಷ್ಣರಾಯರು

ಲೇಖನ: ಎಲ್. ಎಸ್. ಶಾಸ್ತ್ರಿ

ಒಂದು ಹಂತದಲ್ಲಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮರಾಠಿ ಭಾಷೆಯ ಪ್ರಾಬಲ್ಯ ಹೆಚ್ಚಿದಾಗ ಅದನ್ನು ಹತ್ತಿಕ್ಕಲು ಕನ್ನಡಿಗರನ್ನು ಜಾಗೃತಗೊಳಿಸುವ ಕೆಲಸ ಮಾಡಿದವರಲ್ಲಿ ಶಾಂತಕವಿ, ಆಲೂರು ವೆಂಕಟರಾಯರು ಮತ್ತು ಮುದವೀಡು ಕೃಷ್ಣರಾಯರಂತಹ ಮಹನೀಯರು ಪ್ರಮುಖರು. ಗದಗ , ಧಾರವಾಡ, ಬೆಳಗಾವಿ ಮೊದಲಾದೆಡೆ ಇವರ ಸಿಂಹಗರ್ಜನೆ ಮೊಳಗಿದಾಗ ಕನ್ನಡಿಗರು ಎಚ್ಚತ್ತುಕೊಳ್ಳುವಂತಾಯಿತು.
‌ಮುದವೀಡು ಎನ್ನುವದು ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಒಂದು ಗ್ರಾಮ. ಅಲ್ಲಿಂದ ಕರ್ನಾಟಕಕ್ಕೆ ಬಂದು‌ ನೆಲೆಸಿದ ಹನುಮಂತರಾವ್- ಗಂಗಾಬಾಯಿಯವರ ಸುಪುತ್ರನಾಗಿ 1974 ಜುಲೈ 24 ರಂದು ಬಾಗಲಕೋಟೆಯಲ್ಲಿ ಜನಿಸಿದ ಕೃಷ್ಣರಾಯರು ಕಾರವಾರ ಧಾರವಾಡಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಅರ್ಧಕ್ಕೇ ಶಿಕ್ಷಣ ನಿಲ್ಲಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಟಿಳಕರ ಅನುಯಾಯಿಯಾಗಿ ದೇಶಸೇವೆಗೆ ಟೊಂಕ ಕಟ್ಟಿದರು. ಸಾರ್ವಜನಿಕ ಗಣೇಶೋತ್ಸವ, ನಾಡಹಬ್ಬಗಳನ್ನೆಲ್ಲ ಆಚರಿಸಲು ಪ್ರೇರಣೆ ನೀಡಿದ ಅವರು 1974 ರ ಬೆಳಗಾವಿ ಮಹಾಧಿವೇಶನದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡರು. ಪಾನನಿರೋಧ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆಯಾಯಿತು. ನಂತರ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಮತ್ತೆ ಎರಡು ವರ್ಷ ಸ್ಥಾನಬದ್ಧತೆ ಶಿಕ್ಷೆ ಅನುಭವಿಸಿದರು.
‌ ‌ ‌‌‌ ಕನ್ನಡ, ಇಂಗ್ಲಿಷ್, ಹಿಂದಿ , ಸಂಸ್ಕೃತ ಭಾಷೆಗಳಲ್ಲಿ ಅಸ್ಖಲಿತವಾಗಿ ಮಾತನಾಡುತ್ತಿದ್ದ ವಾಗ್ಮಿ ಕೃಷ್ಣರಾಯರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕ ವೃತ್ತ, ಧನಂಜಯ ಎಂಬ ಪತ್ರಿಕೆಗಳನ್ನು ಕಾಲು ಶತಮಾನ ನಡೆಸಿದರು. ನೆಹರೂ, ರಾಜಾಜಿ , ಪಟ್ಟಾಭಿ ಸೀತಾರಾಮಯ್ಯ ಮೊದಲಾದ ರಾಷ್ಟ್ರ ನಾಯಕರ ಭಾಷಣಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವದಕ್ಕೆ ಅವರನ್ನೇ ಕರೆಯಲಾಗುತ್ತಿತ್ತು.
1902 ರಲ್ಲಿ ಭಾರತ ಕಲೋತ್ತೇಜಕ ನಾಟಕ ಮಂಡಳಿ ಸ್ಥಾಪಿಸಿ ಪ್ರೇಮಭಂಗ ಮೊದಲಾದ ನಾಟಕಗಳನ್ನು ಬರೆದು ಆಡಿಸಿ ದೇಶಪ್ರೇಮ ಜಾಗೃತಗೊಳಿಸುವ ಕೆಲಸ ಮಾಡಿದರು‌. ಚಿತ್ತೂರು ಮುತ್ತಿಗೆ, ಕಾದಂಬರಿ, ಮರಾಠಿಯಿಂದ ಹಲವು ನಾಟಕಗಳ ಅನುವಾದ, ಕವನ ರಚನೆ ಮಾಡಿದ ಅವರು ಮುದ್ದುಮೋಹನ ಎಂಬ ಅಂಕಿತನಾಮ ಬಳಸುತ್ತಿದ್ದರು. ಚಿರಂಜೀವಿ ಎಂಬ ಆರಂಭದ ಕನ್ನಡ ಸಿನಿಮಾದಲ್ಲಿಯೂ ಅವರು ಅಭಿನಯಿಸಿದ್ದರು. ಅವರದು ಬಹುಮುಖ ಪ್ರತಿಭೆ.
ಬೆಳಗಾವಿಯಲ್ಲಿ 1939 ರಲ್ಲಿ ಜರುಗಿದ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವ ಅವರಿಗೆ ದೊರಕಿತು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದನ್ನು ನೋಡಿಯೇ ಅವರು ಸೆಪ್ಟೆಂಬರ್ 7 ರಂದು ಕೊನೆಯುಸಿರೆಳೆದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button