Karnataka NewsLatestPolitics

*ಮುನಿರತ್ನ ಪ್ರಕರಣ: ಗುತ್ತಿಗೆದಾರ ಚಲುವರಾಜು ಮನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ*

ಪ್ರಗತಿವಾಹಿನಿ ಸುದ್ದಿ: ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಂದ ಜಾತಿ ನಿಂದನೆ, ಜೀವ ಬೆದರಿಕೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಹೀನ ಮಾತುಗಳಿಂದ ನೊಂದಿರುವ ಬಿಬಿಎಂಪಿ ಗುತ್ತಿಗೆದಾರರಾದ ಚಲುವರಾಜು ಅವರ ಮನೆಗೆ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಚಲುವರಾಜು ಕುಟುಂಬದೊಂದಿಗೆ ಸರ್ಕಾರವಿದೆ
ಬಳಿಕ ಮಾತನಾಡಿದ ಸಚಿವರು, ಬಿಜೆಪಿ ಶಾಸಕರ ನಿಂದನೆ ಮಾತುಗಳಿಂದ ನೊಂದಿರುವ ಚಲುವರಾಜು ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸರ್ಕಾರದಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವುದಾಗಿ ಹೇಳಿದರು.

ಕಳೆದ ಎರಡು ದಿನಗಳಿಂದ ಮಾಧ್ಯಮದಲ್ಲಿ ಬರುತ್ತಿರುವ ವಿಚಾರವನ್ನು ಸೂಕ್ಷ್ಮವಾಗಿ ಸರ್ಕಾರ ಗಮನಿಸುತ್ತಿದೆ. ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡ್ವೇಕು ಅಂತಾ ಬಂದಿರುವೆ. ಆಡಿಯೋ ಕೇಳಿಸಿಕೊಡಿಲ್ಲ, ಅಸಹ್ಯವಾಗಿ ಇದೆ ಅಂತ ಕೇಳಿದವರು ಹೇಳುತ್ತಾರೆ. ಗುತ್ತಿಗೆದಾರ ಚಲುವರಾಜು ಜೊತೆ ಸರ್ಕಾರ ಇರುತ್ತದೆ. ಅವರ ಕುಟುಂಬದ ರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮುನಿರತ್ನ ಅವರಿಗೆ ಶೋಭೆ ತರುವುದಿಲ್ಲ
ಗುತ್ತಿಗೆದಾರನ ಮೇಳೆ ಮಾಜಿ ಮಂತ್ರಿಗಳು ಜಾತಿ ನಿಂದನೆ ಮಾಡುವುದು ಸರಿಯಲ್ಲ. ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮುನಿರತ್ನ ಅವರ ಮಾತುಗಳಿಂದ ಚಲುವರಾಜು ಕುಟುಂಬ ಖಿನ್ನತೆಗೆ ಒಳಪಟ್ಟಿದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕೆ ಧೈರ್ಯ ಹೇಳುವುದಕ್ಕೆ ಅವರ ಮನೆಗೆ ಭೇಟಿ ನೀಡಿರುವೆ ಎಂದು ಸಚಿವರು ಹೇಳಿದರು.

ಅಶೋಕ್ ಅವರಿಗೂ ಏನು ಅಂತ ಗೊತ್ತಿದೆ
ಎಫ್‌ಎಪ್‌ಎಲ್ ವರದಿ ಬರುವುದಕ್ಕಿಂತ ಮುಂಚೆಯೇ ಮುನಿರತ್ನ ಅವರನ್ನು ಬಂಧಿಸಿರುವ ಬಗ್ಗೆ ಆಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣದ ನಿಜಾಂಶ ಅವರಿಗೂ ಗೊತ್ತಿದೆ. ವಿರೋಧ ಪಕ್ಷದಲ್ಲಿರುವ ಕಾರಣ ಅವರು ಸರ್ಕಾರವನ್ನು ದೂರುವುದು, ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯ ಎಂದು ಸಚಿವರು ಹೇಳಿದರು.

ಚಲುವರಾಜು ಪತ್ನಿಗೆ ಸಚಿವರಿಂದ ಧೈರ್ಯ
ಸಚಿವರ ಎದುರು ಕಣ್ಣೀರು ಹಾಕಿದ ಚಲುವರಾಜು ಪತ್ನಿ, ನಮ್ಮ ಪತಿ ಹಾಗೂ ನಮ್ಮ ಮನೆಗೆ ಭದ್ರತೆ ಕೊಡಿ ಎಂದು ಸಚಿವರಿಗೆ ಮನವಿ ಮಾಡಿದರು. “ಹೆದರಬೇಡಮ್ಮ, ನಾವೆಲ್ಲಾ ಇರುವಾಗ ಯಾಕೆ ಭಯಪಡುತ್ತೀರಾ. ದೈನಂದಿನ ಕೆಲಸಗಳಲ್ಲಿ ಆರಾಮಾಗಿ ತೊಡಗಿಕೊಳ್ಳಿ’ ಎಂದು ಸಚಿವರು ಧೈರ್ಯ ತುಂಬಿದರು.

ಸಚಿವರ ಎದುರು ಚಲುವರಾಜು ಅಳಲು
ಶಾಸಕರು ಹಣಕ್ಕಾಗಿ ಹಿಂಸೆ ಕೊಟ್ಟಿದ್ದಾರೆ. ಕೊಠಡಿಯಲ್ಲಿ ಕೂಡಿಹಾಕಿ ಹಿಂಸೆಕೊಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹೊಡೆದು ಹಾಕಿದ್ದು ಯಾರು ಗೊತ್ತಾ ಅಂತ ಕೇಳಿದ್ರು, ಸಂಪೂರ್ಣ ಘಟನೆಯನ್ನು ಸಚಿವರಿಗೆ ಗುತ್ತಿಗೆದಾರ ಚಲುರಾಜು ವಿವರಿಸಿದರು. ಆಡಿಯೋ ವಿಚಾರದಲ್ಲಿ ನಿಜ ಗೊತ್ತಾಬೇಕು ಅಂದರೆ, ತಿರುಪತಿಗೆ ಬಂದು ಆಣೆ ಪ್ರಮಾಣ ಮಾಡಲಿ. ಆಡಿಯೋದಲ್ಲಿ ಯಾರ ದನಿ ಅನ್ನೊದು ಅವರು ತಿರುಪತಿಯಲ್ಲಿ ಹೇಳಲಿ ಎಂದು ಚಲುವರಾಜು ಸವಾಲು ಹಾಕಿದರು.

ನಾನು ಮತ್ತು ನನ್ನ ಕುಟುಂಬ ಭಯಗ್ರಸ್ಥರಾಗಿದ್ದು, ನಮಗೆ ರಕ್ಷಣೆ ಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದೇವೆ ಎಂದರು.

ಹನುಮಂತರಾಯಪ್ಪನ ಜೊತೆ ಮಾತಾಡಿರೋ ವಿಡಿಯೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಚಲುವರಾಜು, ಹೌದು ನಾನೇ ಮಾತಾಡಿರೋದು, ಮಾತಾಡಿರೋದು ಸತ್ಯ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ನಾನು ಸಹಕರಿಸುತ್ತಾ ಇದ್ದೇನೆ. ತನಿಖೆ ಮುಗಿಲಿ ಇನ್ನೂ ಎರಡು ಆಡಿಯೋ, ಸಿಡಿ ಇದೆ, ನಾಳೆ ಬಿಡುಗಡೆ ಮಾಡುತ್ತೇನೆ. ತನಿಖೆ ಮುಗಿದ ತಕ್ಷಣವೇ ನಾನು ಮತ್ತೆರಡು ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button