
ಪ್ರಗತಿವಾಹಿನಿ ಸುದ್ದಿ, ವಿಜಯಪುರ : ಖಾವಿವಸ್ತ್ರಧರಿಸುತ್ತಿದ್ದರಿಂದ ಜನರಿಂದ ಸಾಧುಗಳೆಂದು ಕರೆಯಲ್ಪಡುತ್ತಿದ್ದ ಇಬ್ಬರು ವ್ಯಕ್ತಿಗಳು ತಮ್ಮಲ್ಲೇ ಜಗಳವಾಡಿಕೊಂಡು ಅದು ವಿಕೋಪಕ್ಕೆ ತಿರುಗಿದ್ದರಿಂದ ಓರ್ವ ಮತೊಬ್ಬರನ್ನು ಹತ್ಯೆ ಮಾಡಿದ ಪ್ರಕರಣ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಾಳ್ಯಾಳ್ ಗ್ರಾಮದಲ್ಲಿ ಸಂಭವಿಸಿದೆ.
ಅರ್ಜುನ್ ಕುರುಬರ ಹಾಗು ಚಂದ್ರಕಾಂತ್ ಹಡಪದ ಸ್ನೇಹಿತರು. ಜೀವನದಲ್ಲಿ ವೈರಾಗ್ಯಮೂಡಿ ಖಾವಿ ವಸ್ತ್ರ ಧರಿಸಿ ಸಾಧುಗಳಂತೆ ಗೃಹಸ್ಥ ಜೀವನದಿಂದ ಹೊರಗಿದ್ದು, ಯಾವಾಗಲೂ ಜೊತೆಯಾಗಿರುತ್ತಿದ್ದರು. ಒಂದು ಊರಿಂದ ಮತ್ತೊಂದು ಊರಿಗೆ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದ ಇವರು ತಾವು ಬಂದಾಗ ಯಾವಾಗಲೂ ಇಳಿದುಕೊಳ್ಳುತಿದ್ದ ಬಾಳ್ಯಾಳ್ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ಆದರೆ ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ 65 ವರ್ಷದ ಅರ್ಜುನ್ ಕುರುಬರ ಕೊಲೆಯಲ್ಲಿ ಕೊನೆಗೊಂಡಿದೆ.
ಚಂದ್ರಕಾಂತ್ ಹಡಪದ್ ಕುಡುಗೋಲಿನಿಂದ ಅರ್ಜುನ್ ಕುರುಬರ ಮೇಲೆ ದಾಳಿ ಮಾಡಿದ್ದರಿಂದ ಅವರು ಸ್ಥಳದಲ್ಲಿಯೇ ಅಸುನೀಗಿದರು. ಘಟನೆ ನಂತರ ಪರಾರಿಯಾಗಿದ್ದ ಹಡಪದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ