
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿನ್ನೆ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯಲ್ಲಿ ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಿದ್ದ 6 ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಶಹಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಲ್ಲ 6 ಜನರೂ ಅಂಬೇಡ್ಕರ್ ಗಲ್ಲಿಯವರೇ ಆಗಿದ್ದಾರೆ. ಜ್ಯೋತಿರಾಜ ಸಿದ್ರಾಯಿ ದೊಡ್ಮನಿ(24), ಅಕ್ಷಯ ಕೃಷ್ಣ ಕೋಲ್ಕಾರ್ (24), ಪ್ರಶಾಂತ ಯಲ್ಲಪ್ಪ ಕಳ್ಳಿಮನಿ (30), ಪ್ರಶಾಂತ ಬಸವಂತ ಗರಾಣಿ (28), ರೋಹಿತ್ ರಾಜೇಂದ್ರ ದೊಡ್ಮನಿ (23), ಶಿವರಾಜ ಸೋನ್ಯಾ ತಂದೆ ನಾಗೇಶ ದೊಡ್ಮನಿ (21) ಆರೋಪಿಗಳು.
ಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್ಐ ಮಂಜುನಾಥ ನಾಯಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು ಮತ್ತು ಕೊಲೆಯಾದಾತ ಎಲ್ಲರೂ ಒಂದೇ ಗಲ್ಲಿಯ ಯುವಕರು. ಎಲ್ಲರೂ ಕೂಡಿ ಹರಟೆ ಹೊಡೆಯುವವರೇ. ಆದರೆ ಕಳೆದ 4 -5 ವರ್ಷದಿಂದ ಪರಸ್ಪರರಲ್ಲಿ ತಾವೇ ಮೇಲು ಎನ್ನುವ ಜಿದ್ದು ನಡೆಯುತ್ತಿತ್ತು. ಆಗಾಗ ಈ ವಿಷಯವಾಗಿ ಜಗಳವೂ ನಡೆಯುತ್ತಿತ್ತು.
ಬುಧವಾರ ಗಲ್ಲಿಯಲ್ಲಿ ನಡೆದ ಮದುವೆಯೊಂದರ ಸಂದರ್ಭದಲ್ಲೂ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ಹತ್ತಿರದ ಲಕ್ಷ್ಮಿ ಗುಡಿ ಬಳಿ ಕಾಲಿ ಜಾಗದಲ್ಲಿ ಎಲ್ಲರೂ ಸೇರಿದ್ದಾಗ ಜಯಪಾಲ ಗರಾನೆಯನ್ನು ಕೊಚ್ಚಿ ಹಾಕಲಾಗಿದೆ ಎಂದು ಡಿಸಿಪಿ ವಿಕ್ರಮ್ ಅಮಟೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪೊಲೀಸರ ತುರ್ತು ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ.
ಕಾರು ಚಾಲಕನ ಅಡ್ಡಗಟ್ಟಿ ಬರ್ಬರ ಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ