CrimeFilm & EntertainmentKannada NewsLatestNational

*ಕೋರ್ಟ್‌ಗೆ ಬರುವಾಗ ಕೈಕೋಳ, ಕಾಲಿಗೆ ಸರಪಳಿ ಹಾಕುವಂತೆ ಆರೋಪಿಗಳ ಮನವಿ*: *ಕಾರಣವೇನು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ಸಾಮಾನ್ಯವಾಗಿ ಆರೋಪಿಗಳು ಕೈಕೋಳದಿಂದ ಮುಕ್ತಿ ಪಡೆಯಲು ನ್ಯಾಯಾಲಯದ ಮೊರೆ ಹೋಗುತ್ತಾರೆ. ಆದರೆ ಇಲ್ಲೊಂದು ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ತಮಗೆ ಕೈಕೋಳ ಮತ್ತು ಕಾಲಿಗೆ ಸರಪಳಿ ಹಾಕುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪೊಲೀಸರಿಂದ ನಕಲಿ ಎನ್‌ಕೌಂಟರ್ ನಡೆಯಬಹುದು ಎಂಬ ಭೀತಿಯೇ ಈ ವಿಚಿತ್ರ ಮನವಿಗೆ ಕಾರಣವಾಗಿದೆ. ಅಚ್ಚರಿಯ ಸಂಗತಿಯೆಂದರೆ, ಆರೋಪಿಗಳ ಮನವಿಯನ್ನು ನ್ಯಾಯಾಲಯವೂ ಪುರಸ್ಕರಿಸಿ, ಅವರ ಸುರಕ್ಷತೆಗೆ ವಿಶೇಷ ಆದೇಶ ಹೊರಡಿಸಿದೆ.

ಹರಿಯಾಣದ ಗಾಯಕ ಅಂಕಿತ್ ಬಲಿಯಾನ್ ಹತ್ಯೆ ಪ್ರಕರಣದ ಆರೋಪಿಗಳಾದ ದೀಪಕ್ ಅಲಿಯಾಸ್ ತೀತರ್ ಮತ್ತು ಯೋಗೇಶ್ ಅಲಿಯಾಸ್ ತುಂಡಾ ಈ ಮನವಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರು ತಮ್ಮನ್ನು ನಕಲಿ ಎನ್‌ಕೌಂಟರ್ ಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಕೈಕೋಳ ಹಾಗೂ ಕಾಲುಗಳಿಗೆ ಸರಪಳಿ ಹಾಕುವಂತೆ ಕೋರಿದ್ದಾರೆ. ನವೆಂಬರ್ 3ರಂದು ಉತ್ತರ ಪ್ರದೇಶದ ಶಾಮ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂಬಂಧ ಈ ಮನವಿ ಸಲ್ಲಿಸಲಾಗಿತ್ತು.

ಆರೋಪಿಗಳ ಮನವಿಯನ್ನು ಪರಿಶೀಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಮಹತ್ವದ ಆದೇಶ ಹೊರಡಿಸಿದ್ದಾರೆ. ತಿಹಾರ್ ಜೈಲಿನಿಂದ ಶಾಮ್ಲಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆದೊಯ್ಯುವಾಗ ಮತ್ತು ವಾಪಸ್ ಕರೆತರುವಾಗ ಕೈಕೋಳ ಹಾಗೂ ಕಾಲುಗಳಿಗೆ ಸರಪಳಿ ಹಾಕುವಂತೆ ಸೂಚಿಸಿದ್ದಾರೆ.

ಇಷ್ಟೇ ಅಲ್ಲ, ಪ್ರಯಾಣದ ವೇಳೆ ಇಬ್ಬರೂ ಆರೋಪಿಗಳಿಗೆ ಬುಲೆಟ್‌ಪ್ರೂಫ್ ಜಾಕೆಟ್ ಧರಿಸುವ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ತಿಹಾರ್ ಜೈಲು ಅಧಿಕಾರಿಗಳು ಮತ್ತು ನಾರ್ತ್ ಅವೆನ್ಯೂ ಡಿಸಿಪಿ ಆರೋಪಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಪ್ರಯಾಣದ ವೇಳೆ ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆದೇಶಿಸಿದೆ.

ಒಟ್ಟಾರೆ, ಪೊಲೀಸರಿಂದಲೇ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಆತಂಕ ವ್ಯಕ್ತಪಡಿಸಿರುವ ಆರೋಪಿಗಳು, ಕೈಕೋಳ ಮತ್ತು ಕಾಲು ಸರಪಳಿಯನ್ನೇ ಸುರಕ್ಷತೆಯ ಮಾರ್ಗವಾಗಿ ಆಯ್ಕೆ ಮಾಡಿಕೊಂಡಿರುವುದು ಗಮನ ಸೆಳೆದಿದೆ.

Related Articles

Back to top button