ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್ಇ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಸುಗಮಸಂಗೀತ ಮತ್ತು ಅದರ ಪ್ರಕಾರಗಳ ಕಾರ್ಯಾಗಾರ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೊಲ್ಲಾಪುರದ ಸುಪ್ರಸಿದ್ಧ ಸುಗಮಸಂಗೀತ ಕಲಾವಿದೆ ಡಾಕ್ಟರ್ ಭಾಗ್ಯಶ್ರೀ ಮೂಳೆ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಅವರು ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ, ಸುಗಮ ಸಂಗೀತದಲ್ಲಿ ಕಾವ್ಯ, ಭಾವ, ಸ್ವರ, ಇವುಗಳ ಮಹತ್ವವನ್ನು ಹೇಳುತ್ತ “ಸುಗಮ” ಇದರ ಅರ್ಥ “ಸರಳ”. ಆದರೆ ಅದು ಅಷ್ಟು ಸುಲಭವಲ್ಲದೆ, ಅದೂ ಸಹ ಶಾಸ್ತ್ರೀಯ ಸಂಗೀತದ ತರಹ ಅಷ್ಟೇ ಕಠಿಣವಾಗಿದೆ ಎಂದು ಪ್ರಾತ್ಯಕ್ಷಿಕೆ ನೀಡಿದರು.
ಇದಾದನಂತರ ಯಮನ್ ರಾಗದ ಆಧಾರಿತ ಪ್ರಕಾರಗಳಾದ ಭಾವಗೀತೆ, ಭಕ್ತಿ ಗೀತೆ, ಗಜಲ್, ಸಿನಿಮಾ ಸಂಗೀತ ಈ ಪ್ರಕಾರಗಳ ಪ್ರಾತ್ಯಕ್ಷಿಕೆ ನೀಡಿ ಅದರ ವಿವರಣೆ ನೀಡಿದರು. ನಂತರ ಸುಗಮ ಸಂಗೀತದ ಪ್ರಕಾರಗಳಾದ ನಾಟ್ಯ ಗೀತೆ, ಜನಪದ ಗೀತೆಯ ಪ್ರಕಾರಗಳಾದ ಬೀಸು ಕಲ್ಲಿನ ಪದ, ತತ್ವಪದ, ಜೋಗುಳ ಪದ, ಗೀಗಿ ಪದ, ಲಾವಣಿ ಹಾಗೂ ದೇಶಭಕ್ತಿಗೀತೆಗಳ ಪ್ರಾತ್ಯಕ್ಷಿಕೆ ಜೊತೆಗೆ ಮಾಹಿತಿ ನೀಡಿದರು.
ಭೈರವಿ ಭಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು.ಈ ಕಾರ್ಯಕ್ರಮಕ್ಕೆ ತಬಲಾ ಸಾಥಿ ರಾಜೇಂದ್ರ ಭಾಗವತ್, ಹಾರ್ಮೋನಿಯಂ ಸಾಥಿ ಯಾದವೇಂದ್ರ ಪೂಜಾರಿ, ತಾಳ ಸಾಥಿ ಜಿತೆಂದ್ರ ಸಾಬಣ್ಣನವರ್ ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಗೀತ ವಿಭಾಗದ ಪ್ರಾಧ್ಯಾಪಕಿ ಸುನೀತಾ ಪಾಟೀಲ ಹಾಗೂ ವಂದನಾರ್ಪಣೆಯನ್ನು ದುರ್ಗಾ ನಾಡಕರ್ಣಿ ಮಾಡಿದರು. ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಸ್ನೇಹಾ ರಾಜೂರಿಕರ ಸಂಗೀತ ವಿಭಾಗದ ಸಂಯೋಜಕರಾದ ಡಾಕ್ಟರ್ ರಾಜೇಂದ್ರ ಭಾಂದನಕರ ಹಾಗೂ ಬೆಳಗಾವಿಯ ಸಂಗೀತ ಕಲಾವಿದರಾದ ಮುಕುಂದ ಗೋರೆ, ಶ್ರೀಧರ ಕುಲಕರ್ಣಿ, ಶ್ರೀರಂಗ ಜೋಶಿ, ಮತ್ತಿತರರು ಮತ್ತು ಸಂಗೀತ ವಿಭಾಗದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ