*ನನ್ನ ಕ್ಷೇತ್ರದ ಮಕ್ಕಳು ಉನ್ನತ ಸ್ಥಾನಕ್ಕೇರುವುದನ್ನು ನೋಡುವುದೇ ನನ್ನ ಕನಸು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್* *ಕುದ್ರೆಮನಿ, ಬೆಕ್ಕಿನಕೇರಿ ಗ್ರಾಮಗಳಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಕ್ಕಳ ಶಿಕ್ಷಣದ ಮೇಲೆಯೇ ಅವಲಂಬಿಸಿದೆ. ನನ್ನ ಕ್ಷೇತ್ರದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರುವುದನ್ನು ನೋಡಬೇಕೆನ್ನುವುದೇ ನನ್ನ ದೊಡ್ಡ ಕನಸು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕ್ಷೇತ್ರದ ಕುದ್ರೇಮನಿ ಮತ್ತು ಬೆಕ್ಕಿನಕೇರಿಯಲ್ಲಿ ಬುಧವಾರ ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ನಮ್ಮ ಕ್ಷೇತ್ರದ ಭವಿಷ್ಯ ಶಿಕ್ಷಣದ ಮೇಲೆ ಅವಲಂಬಿಸಿದೆ. ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನನ್ನ ಕ್ಷೇತ್ರದ ಮಕ್ಕಳು ಉತ್ತಮ ಶಿಕ್ಷಣ ಪಡೆದು ರಾಜ್ಯಕ್ಕೆ, ರಾಷ್ಟ್ರಕ್ಕೆ ಹೇಸರು ತರಬೇಕು ಎಂದು ಕರೆ ನೀಡಿದರು.

ದೇಶದ ಭವಿಷ್ಯ, ರಾಜ್ಯದ ಭವಿಷ್ಯ ಗ್ರಾಮದ ಭವಿಷ್ಯ ವಿದ್ಯಾರ್ಥಿಗಳ ಮೇಲಿದೆ. ನಮ್ಮ ಮಕ್ಕಳು ಬಹಳ ದೊಡ್ಡದಾಗಿ ಬೆಳೆಯಬೇಕು. ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು, ಐಎಎಸ್ ಅಧಿಕಾರಿಯಾಗಬೇಕು ಎಂದು ತಾಯಂದಿರು ಕನಸು ಕಾಣುತ್ತಾರೆ. ನಾನು ಈ ಕ್ಷೇತ್ರದ ಮಗಳಾಗಿ ಮಂತ್ರಿಯಾಗಿ ನನ್ನನ್ನು ನೀವೆಲ್ಲ ನೋಡುತ್ತಿದ್ದೀರಿ. ಹಾಗೆಯೇ ನನ್ನ ಕ್ಷೇತ್ರದ ಪ್ರತಿ ಮಗುವು ಸಹ ದೊಡ್ಡ ಸ್ಥಾನಕ್ಕೇರುವುದನ್ನು ನಾನು ನೋಡಬೇಕು ಎಂದು ಅವರು ಹೇಳಿದರು.
ನಾನೂ ನಿಮ್ಮ ಹಾಗೇ ಸರಕಾರಿ ಶಾಲೆಯಲ್ಲಿ ಕಲಿತವಳು. ಕೆಂಪು ಬಸ್ ನಲ್ಲಿ ಓಡಾಡಿದವಳು. ಇಂದು ರಾಜ್ಯದ ಮಂತ್ರಿಯಾಗಿದ್ದೇನೆ. ಈ ಗ್ರಾಮದ ಮಕ್ಕಳು ಸಹ ಉನ್ನತ ಸ್ಥಾನಕ್ಕೆ ಏರಬೇಕು ಎನ್ನುವುದು ನನ್ನ ಕನಸು. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ. ಹಾಗಾಗಿ ನಾನು ಇಲ್ಲಿಯ ಮಕ್ಕಳಿಗೆಲ್ಲ ತಾಯಿ ಸಮಾನ. ನನ್ನ ಈ ಮಕ್ಕಳ ಭವಿಷ್ಯ ನನಗೆ ಮುಖ್ಯ. ಅದಕ್ಕಾಗಿ ನೀವೆಲ್ಲ ಕಷ್ಟಪಟ್ಟು ಓದಬೇಕು. ಇನ್ನು 10 -15 ವರ್ಷದ ನಿಂತರ ನನ್ನ ಮುಂದೆ ಬಂದು ನಿಂತು ನಾನು ಡಾಕ್ಟರ್ ಆಗಿದ್ದೇನೆ, ಎಂಜಿನಿಯರ್ ಆಗಿದ್ದೇನೆ ಎಂದು ಹೇಳಬೇಕು. ಈ ಗ್ರಾಮದ ಹೆಸರನ್ನು ಉಜ್ವಲಗೊಳಿಸಬೇಕು ಎಂದು ಹೆಬ್ಬಾಳಕರ್ ಹೇಳಿದರು.

ನೀವೆಲ್ಲ ನಿಮ್ಮ ಕ್ಷೇತ್ರದ ಮಗಳು ಮಂತ್ರಿಯಾಗಿದ್ದಾರೆ ಎಂದು ಹೆಮ್ಮೆ ಪಡುತ್ತಿದ್ದೀರಿ. ಹಾಗೆಯೇ ನನ್ನ ಕ್ಷೇತ್ರದ ಮಕ್ಕಳು ಉನ್ನತ ಸ್ಥಾನಕ್ಕೇರುವುದನ್ನು ನೋಡುವುದೇ ನನ್ನ ಕನಸು, ನನ್ನ ಕ್ಷೇತ್ರದ ಮಕ್ಕಳು ಎಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು, ಐಎಎಸ್ ಅಧಿಕಾರಿಯಾಗಬೇಕು. ಪಾಲಕರು ಹೆಮ್ಮೆಯಿಂದ ಮಕ್ಕಳ ಬಗ್ಗೆ ಮಾತನಾಡುವಂತಾದರೆ ಅದೇ ನನಗೆ ಖುಷಿ. ಮನುಷ್ಯ ಜೀವನ ಎನ್ನುವುದನ್ನು ಪಡೆದಿರುವುದೇ ನಮ್ಮ ಸುಧೈವ. ಹಾಗಾಗಿ ಸಾರ್ಥಕಪಡಿಸಿಕೊಂಡು ಬದುಕಬೇಕು ಎಂದರು.
ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಕೊಟ್ಯಂತರ ರೂ.ಗಳ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ, ಮಂದಿರ, ಗಟಾರ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಚುನಾವಣೆ ನಂತರ ಯಾವ ರಾಜಕೀಯವೂ ಇಲ್ಲ, ಕೇವಲ ಅಭಿವೃದ್ಧಿ, ಅಭಿವೃದ್ಧಿ ಅಭಿವೃದ್ಧಿ ನನ್ನ ಮಂತ್ರ. ಯಾವ ಗ್ರಾಮವನ್ನೂ ಬಿಡದೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಉಚಗಾಂವ್ ಮತ್ತು ಬೆಳಗುಂದಿಯಲ್ಲಿ ಪಿಯು ಕಾಲೇಜು ಮತ್ತು ಪದವಿ ಕಾಲೇಜು ಆರಂಭಿಸಲು ಪ್ರಯತ್ನಿಸುತ್ತಿದ್ದೇನೆ. ಒಟ್ಟಾರೆ ಶಿಕ್ಷಣದಲ್ಲಿ ಕ್ಷೇತ್ರ ಹಿಂದುಳಿಯಬಾರದೆನ್ನುವುದೇ ನನ್ನ ಗುರಿ ಎಂದು ಸಚಿವರು ಹೇಳಿದರು.

ಕುದ್ರೆಮನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡಿರುವ ನೂತನ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಶುರಾಮ ತುರಕೆವಾಡಿಕರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಾಯಕ ಪಾಟೀಲ, ಸದಸ್ಯರಾದ ಅರುಣ ದೇವನ್, ವಿಮಲ್ ಸಾಖ್ರೆ, ಲತಾ ಶಿವಾಂಗೇಕರ್, ದೀಪಕ್ ಪಾಟೀಲ, ವೈಜು ರಾಜಗೋಳ್ಕರ್, ಪಿಂಟು ಕಾಗನಕರ್ ಮುಂತಾದವರು ಉಪಸ್ಥಿತರಿದ್ದರು.

ನಂತರ ಬೆಕ್ಕಿನಕೇರಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಜೊತೆಗೆ ಅಂಗನವಾಡಿ ಕಟ್ಟಡವನ್ನು ಸಹ ಉದ್ಘಾಟಿಸಿಲಾಯಿತು. ಸುಮಾರು 33.10 ಲಕ್ಷ ರೂ,ಗಳ ವೆಚ್ಚದಲ್ಲಿ ಕೊಠಡಿಗಳು ನಿರ್ಮಾಣಗೊಳ್ಳಲಿವೆ.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಹ ಸಚಿವರು ಪಾಲ್ಗೊಂಡು, ಸಸಿಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಗಜಾನನ ಮೋರೆ, ಶಿವಾಜಿ ಕಾಗಣಿಕರ್, ಶೆಗುಣಸಿ, ಕಲ್ಲಪ್ಪ ಬಾತ್ಕಂಡೆ, ಮಾರುತಿ ಕಾದರವಾಡ್ಕರ್, ನಾಗೇಶ ಬಾಳೇಕುಂದ್ರಿ, ಮೋಹನ್ ಪವಾರ್, ಜಯವಂತ ಬಾಳೇಕುಂದ್ರಿ, ಪಿಡಿಒ ಚಂದರಗಿ, ಚಂಬಾ ಕಾಂಬಳೆ, ಬಿಇಒ ಎಂ.ಎಸ್.ಮೇದಾರ್, ಗಂಗುಬಾಯಿ ಗಾವಡೆ, ನಾರಾಯಣ ಬಾದುರ್ಗೆ, ಮಲ್ಲಪ್ಪ ಗಾವಡೆ, ಈರಪ್ಪ ಗಾವಡೆ, ಪ್ರಭಾಕರ್ ಬಾತ್ಕಂಡೆ, ಮಲ್ಲಪ್ಪ ಸಾವಂತ, ನಾರಾಯಣ ಬೆಳಗಾಂವ್ಕರ್, ಬಾಬು ಕಾಂಬಳೆ, ವಾಸುದೇವ್ ಯಳ್ಳೂರಕರ್, ಅರಣ್ಣ ಇಲಾಖೆ ಸಿಬ್ಬಂದಿ, ರಾಮಾ ಕುಮರಿಕರ್, ಸಿ.ಪಿ.ಆಯ್ ಶಿಂಘೆ ಮುಂತಾದವರು ಉಪಸ್ಥಿತರಿದ್ದರು.