Karnataka NewsLatestPolitics

*ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ: ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ: ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅಭಿಮನ್ಯು ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ರಾಜೋಚಿತ ಬೀಳ್ಕೊಡುಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.


ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಅವರು, ದಸರಾ ಮಹೋತ್ಸವದಲ್ಲಿ ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾದ 750 ಕೆ.ಜಿ. ತೂಕದ ಚಿನ್ನದಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿಗೆ ನಾಡಿನಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಏಕಾ ಏಕಿ ಅಭಿಮನ್ಯುವನ್ನು ದಸರಾ ಮಹೋತ್ಸವದಿಂದ ಹೊರಗಿಡುವ ಬದಲು ನಿಶಾನೆ ಆನೆಯಾಗಿ ಬಳಸಿ, ಗೌರವಪೂರ್ವಕವಾಗಿ ಹಾಗೂ ರಾಜೋಚಿತವಾಗಿ ಬೀಳ್ಕೊಡುಗೆ ನೀಡಬೇಕು ಎಂದು ಕೋರಿದ್ದಾರೆ.

Home add -Advt


ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯೇ ವಿಜಯದಶಮಿ ಜಂಬೂಸವಾರಿ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಬಗ್ಗೆ ರಾಜ್ಯದ ಜನತೆಗೆ ಅವಿನಾಭಾವ ಸಂಬಂಧವಿದೆ. ಚಿನ್ನದಂಬಾರಿ ಹೊರುವ ಆನೆಗಳ ಬಗ್ಗೆಯಂತೂ ವಿಶೇಷ ಪ್ರೀತಿ ಇದೆ. ಬಾರಿ ದಸರಾ ಮಹೋತ್ಸವದಿಂದ ಕ್ಯಾಪ್ಟನ್ ಅಭಿಮನ್ಯುವನ್ನು ಕೈಬಿಟ್ಟಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ನಾಗರಹೊಳೆಯ ಮತ್ತಿಗೋಡು ಶಿಬಿರದ 59 ವರ್ಷ ವಯಸ್ಸಿನ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದಲ್ಲದೆ, 6 ಬಾರಿ ಅಂಬಾರಿಹೊತ್ತು ರಾಜ್ಯದ ಜನರ ಹೃದಯದಲ್ಲಿ ನೆಲೆಸಿದ್ದಾನೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
1968ರಲ್ಲಿ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ. 60 ವರ್ಷ ತುಂಬಿದ ಬಳಿಕವೂ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ. ಅದೇ ರೀತಿ ಬಲರಾಮ ಕೂಡ ಪಾಲ್ಗೊಂಡಿದ್ದ. ಈ ಗೌರವವನ್ನು ಅಭಿಮನ್ಯುವಿಗೂ ನೀಡಿ, ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡುವಂತೆ ಕೋರಿದ್ದಾರೆ.

Related Articles

Back to top button