ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾಡಹಬ್ಬ ಮೈಸೂರು ದಸರಾ ಸಂಭ್ರಮ ಮುಗಿಲುಮುಟ್ಟಿದ್ದು, ಐತಿಹಾಸಿಕ, ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಅರಮನೆ ಆವರಣದಲ್ಲಿ ಅಂಬಾರಿಯಲ್ಲಿ ಸರ್ವಾಲಂಕಾರ ಭೂಷಿತಳಾಗಿ ವಿರಾಜಮಾನವಾಗಿರುವ ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜಂಬೂ ಸವಾರಿಗೆ ಚಾಲನೆ ನೀಡಿದರು.
ಈ ವೇಳೆ ಯುವರಾಜ ಯಧುವೀರ ಕೃಷ್ಣದತ್ತ ಒಡೆಯರ್, ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದಾ ಮೊದಲಾದವರು ಉಪಸ್ಥಿತರಿದ್ದರು.
750 ಕೆಜಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ್ದು, ಕುಮ್ಕಿ ಆನೆಗಳಾಗಿ ಕಾವೇರಿ, ಚೈತ್ರಾ ಆನೆಗಳು ಹಾಗೂ ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಾಲಸ್ವಾಮಿ, ಸಾಲಾನೆಯಾಗಿ ಅಶ್ವತ್ಥಾಮ ಆನೆಗಳು ಸಾಥ್ ನೀಡಿವೆ.
ಇನ್ನು ದಸರಾ ಮೆರವಣಿಗೆಯಲ್ಲಿ ಈ ಬಾರಿ ಆರೋಗ್ಯ ಇಲಾಖೆ, ಮೂಡಾ, ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಆಜಾದಿಕಾ ಅಮೃತ ಮಹೋತ್ಸವ ಹಾಗೂ ಅರಮನೆ ವಾದ್ಯಗೋಷ್ಠಿ ಸ್ತಬ್ಧ ಚಿತ್ರ ಸೇರಿದಂತೆ ಕೇವಲ 6 ಸ್ತಬ್ಧ ಚಿತ್ರಗಳು ಭಾಗಿಯಾಗಿವೆ.
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ; ದಸರಾ ಮೆರವಣಿಗೆಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ