ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯಾದ್ಯಂತ ಒಂದೆಡೆ ಕೊರೋನಾ ವೈರಸ್ ಆತಂಕ ಹೆಚ್ಚಿದರೆ ಇನ್ನೊಂದೆಡೆ ಹಕ್ಕಿ ಜ್ವರದ ಭೀತಿಯೂ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಕ್ಕಿ ಜ್ವರ ದೃಢಪಟ್ಟ ಕಾರಣ ಜಿಲ್ಲಾಡಳಿತ ಪಕ್ಷಿ ಸರ್ವೇ ಮಾಡಲು ಮುಂದಾಗಿದೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸರ್ವೇ ಮಾಹಿತಿ ನೀಡಿದ್ದು, ಅಧಿಕಾರಿಗಳು ಈವರೆಗೆ ಒಟ್ಟು 6436 ಪಕ್ಷಿಗಳನ್ನು ಗುರುತಿಸಿದ್ದಾರೆ. ಕುಂಬಾರಕೊಪ್ಪಲಿನ 1 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ಕೋಳಿಗಳ ಮಾರಾಟ ಬಂದ್ ಮಾಡಲಾಗಿದೆ. ಕುಂಬಾರಕೊಪ್ಪಲು ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದ್ದು, ಯಾವುದೇ ಪಕ್ಷಿಗಳನ್ನು ಸಾಕುವಂತೆಯೂ ಇಲ್ಲ. ಕಲ್ಲಿಂಗ್ ಆಪರೇಷನ್ ಮೂಲಕ ಇಂದಿನಿಂದಲೇ ಎಲ್ಲ ಪಕ್ಷಿಗಳನ್ನು ಸಾಯಿಸಬೇಕು ಎಂದು ಜಿಲ್ಲಾಡಳಿತ ಆದೇಶಿಸಿದೆ.
ಕೋಳಿ ಮಾತ್ರವಲ್ಲ ಗಿಳಿ, ಪಾರಿವಾಳ, ಲವ್ ಬರ್ಡ್ಸ್, ಬಾತುಕೋಳಿ, ಕೊಕ್ಕರೆ, ಸೇರಿದಂತೆ ಯಾವುದೇ ಪಕ್ಷಿಗಳನ್ನು ಸಾಕಿದ್ದರೂ ಸಾಯಿಸಬೇಕು. ಪಕ್ಷಿಗಳನ್ನು ಸಂರಕ್ಷಿಸಿದರೆ ಕೂಂಬಿಂಗ್ ಕಾರ್ಯಚರಣೆ ಮೂಲಕ ಪಕ್ಷಿಗಳನ್ನು ಸಾಯಿಸಲಾಗುವುದು. ಪಶುಸಂಗೋಪನಾ ಇಲಾಖೆ ಸಿಬ್ಬಂದಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ