ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯದ ಯಾವ ಭಾಗದಲ್ಲೂ ಇನ್ಮುಂದೆ ಲಾಕ್ ಡೌನ್ ಇಲ್ಲ. ಇದನ್ನು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಮುಂದೆ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ ಆ ಮನೆಗಳನ್ನು ಮಾತ್ರ ಸೀಲ್ ಡೌನ್ ಮಾಡಲಾಗುವುದು ಇಲ್ಲವೇ ಬೀದಿಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸಂಬಂಧ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಯಾವುದೇ ನಾಗರಿಕರಿಗೆ ನೆಗಡಿ, ಕೆಮ್ಮಿನಂತಹ ಖಾಯಿಲೆಗಳು ಬಂದಾಗ ಯಾರನ್ನು ಸಂಪರ್ಕಿಸಬೇಕು? ಯಾವ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು? ಯಾವ ಅಧಿಕಾರಿಯನ್ನು ಸಂಪರ್ಕ ಮಾಡಬೇಕು, ನೋಡಲ್ ಅಧಿಕಾರಿ ಯಾರು? ಆರೋಗ್ಯಾಧಿಕಾರಿ ಯಾರು ಎಂಬ ಬಗ್ಗೆ ಕಿರು ಮಾಹಿತಿಯುಳ್ಳ, ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಪಾಂಪ್ಲೆಟ್ ಮಾಡಿ ವಿತರಣೆ ಮಾಡಬೇಕು ಎಂದು ಸೂಚಿಸಿದ ಸಚಿವರು, ಈ ಕೆಲಸ ಎಲ್ಲ ಕ್ಷೇತ್ರಗಳಲ್ಲೂ ಆಗಬೇಕು ಎಂದು ಸೂಚಿಸಿದರು.
ಎಲ್ಲ ನಾಲ್ಕು ಕ್ಷೇತ್ರಗಳಾದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಆಯಾ ಶಾಸಕರ ನೇತೃತ್ವದಲ್ಲಿ ಪ್ರತ್ಯೇಕ ಕಾರ್ಯಪಡೆ ರಚನೆ ಮಾಡಬೇಕು. ಇನ್ನು ಎನ್ ಆರ್ ಕ್ಷೇತ್ರದ ಶಾಸಕರ ಅನಾರೋಗ್ಯ ಹಿನ್ನೆಲೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಕಾರ್ಯಪಡೆ ರಚಿಸಬೇಕು. ಜೊತೆಗೆ ಮನೆ ಮನೆಗೆ ಸಂಪರ್ಕ ಮಾಹಿತಿಯ ಕರಪತ್ರಗಳನ್ನು ತಲುಪಿಸಿ ಎಂದರು.
ಎಲ್ಲ ಕ್ಷೇತ್ರಗಳಿಗೆ ಪ್ರತ್ಯೇಕ ಉಸ್ತುವಾರಿ ವೈದ್ಯಾಧಿಕಾರಿಯೊಬ್ಬರನ್ನು ನೇಮಿಸಬೇಕು. ಇನ್ನು ಹೆಚ್ಚು ಸೋಂಕಿತರು ಇರುವ ಎನ್ ಆರ್ ಕ್ಷೇತ್ರದಲ್ಲಿ ಸಂಸದರ ನೇತೃತ್ವದಲ್ಲಿ ಒಂದು ಪ್ರತ್ಯೇಕ ತಂಡ ರಚಿಸಿ, ಅಧಿಕಾರಿಗಳನ್ನು ನಿಯೋಜಿಸಬೇಕು. ಪಾಸಿಟಿವ್ ಪ್ರಕರಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಿ, ಎಲ್ಲದಕ್ಕಿಂತ ಮುಖ್ಯವಾಗಿ ಕರಪತ್ರ ಮಾಡಿ ಮನೆ ಮನೆಗೆ ತಲುಪಿಸಬೇಕು. ಅದಕ್ಕೆ ನಾಗರಿಕರು ಕರೆ ಮಾಡಿದ ಕೂಡಲೇ ಸ್ಪಂದಿಸಬೇಕು. ಎಲ್ಲಿಯೂ ಲೋಪ ಆಗಬಾರದು. ಇದಕ್ಕಾಗಿ ಅಸಿಸ್ಟೆಂಟ್ ಕಮೀಷನರ್ ಅನ್ನು ಉಸ್ತುವಾರಿಗಳನ್ನಾಗಿ ನಿಸಲು ಮುಂದಾಗಲಾಗುವುದು. ಇವರೆಲ್ಲರಿಗೂ ಜಿಲ್ಲಾಧಿಕಾರಿಗಳು ಮೇಲುಸ್ತುವಾರಿಯಾಗಿರುತ್ತಾರೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಇದೇ ವೇಳೆ ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಜನ ಮೃತಪಟ್ಟಾಗ ಕೋವಿಡ್ ಮಾತ್ರ ಕಾರಣವಾಗುವುದಿಲ್ಲ. ಪ್ರತಿ ವರ್ಷದಂತೆ ಅನೇಕ ಕಾರಣಗಳಿಂದ ಮೃತಪಡುವ ಸಂಗತಿಗಳಿದ್ದು, ಈ ಬಗ್ಗೆ ಮಾಧ್ಯಮದವರು ಸಹಿತ ಎಲ್ಲರೂ ಗಮನ ಹರಿಸಬೇಕು ಎಂದು ತಿಳಿಸಿದರು.
ಕರಪತ್ರಗಳ ಜೊತೆಗೆ ಆಟೋಗಳ ಮೂಲಕವೂ ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದು ಜಿಲ್ಲಾಧಿಕಾರಿಗಳಗೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ