*ಅರಮನೆಯಲ್ಲಿ ರಾಜ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಿದ ರಾಜವಂಶಸ್ಥ ಯದುವೀರ್ ಒಡೆಯರ್*

ಪ್ರಗತಿವಾಹಿನಿ ಸುದ್ದಿ: ನಾಡ ಹಬ್ಬ ದಸರಾ ಮಹೋತ್ಸವದ ಬೆನ್ನಲ್ಲೇ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ-ಸಡಗರ ಮನೆ ಮಾಡಿದೆ. ರಾಜ ವಂಶಸ್ಥ ಯದುವೀರ್ ಒಡೆಯರ್ ರಾಜ ಸಂಪ್ರದಾಯದಂತೆ ಆಯುಧಗಳಿಗೆ ಪೂಜೆ ಸಲ್ಲಿಸಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆಯಿಂದ ಚಂಡಿಕಾ ಹೋಮ ಆರಂಭವಾಗಿದ್ದು ಬಳಿಕ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಯಿತು. ಆಯುಧಗಳನ್ನು ಶುಚಿಗೊಳಿಸಿ ವಾಪಸ್ ಅರಮನೆಗೆ ತರಲಾಯಿತು. ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಣಮಂಟಪಕ್ಕೆ ಕೊಂಡೊಯ್ದು ಆಯುಧಗಳನ್ನು ಜೋಡಿಸಲಾಗಿದ್ದು, ಪೂಜೆಗೆ ಬಳಿಕ ರಾಜವಂಶಸ್ಥ ಯದುವೀರ್ ಒಡೆಯರ್ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿದರು. ಬಳಿಕ ರಾಜಪುರೋಹಿತರ ಮಾರ್ಗದರ್ಶನದಂತೆ ಆಯುಧಪೂಜೆ ನೆರವೇರಿಸಿದರು.
ಕರಿಕಲ್ಲು ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸು ಹಾಗೂ ಅರಮನೆಯಲ್ಲಿರುವ್ ಐಅಷಾರಾಮಿ ಕಾರುಗಳು, ಇಅತರೆ ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು. ಆಯುಧಪೂಜೆ, ಧಾರ್ಮಿಕ ಕೈಂಕರ್ಯಕ್ಕೆ ರಾಣಿ ತ್ರಿಷಿಕಾ ಕುಮಾರಿ, ಪುತ್ರ, ರಾಜಮಾತೆ ಪ್ರಮೋದಾದೇವಿ ಸಾಕ್ಷಿಯಾದರು.
ಇಂದು ಸಂಜೆ ಅರಮನೆಯಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.