Kannada NewsKarnataka NewsLatest

*ಮೈಸೂರು ದಸರಾ ಜಂಬೂಸವಾರಿಗೆ ಸಿಎಂ ಚಾಲನೆ*: *ಚಾಮುಂಡಿ ತಾಯಿಯ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿದ ಕ್ಯಾಪ್ಟನ್ ಪ್ರಶಾಂತ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ರೋಚಕ ಹಾಗೂ ಅಂತಿಮ ಘಟ್ಟವಾದ ಐತಿಹಾಸಿಕ ಜಂಬೂಸವಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್ ಒಡೆಯರ್ ತಾಯಿ ಚಾಮುಂಡಿ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಮೈಸೂರು ಅರಮನೆ ಅಂಗಳದಲ್ಲಿ ತಾಯಿ ಚಾಮುಂಡಿ ಮಾತೆಯ 750 ಕೆಜಿ ತೂಕದ ಚಿನ್ನದ ಅಂಬಾರಿಗೆ ಸಿಎಂ ಡಿ.ಕೆ.ಶಿವಕುಮಾರ್, ಯದುವೀರ್ ಒಡೆಯರ್, ಜಿಲ್ಲಾಧಿಕಾರಿಗಳು, ಸಚಿವ ಶಿವರಾಜ್ ತಂಗಡಗಿ, ಕೇರಳ ಸಿಎಂ ಸತೀಶನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಹಲವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.

ನಾಡ ಅದಿ ದೇವತೆ ಚಾಮುಂಡಿ ತಾಯಿ ವಿರಾಜಮಾನವಾಗಿರುವ 750 ಕೆಜಿಯ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಪ್ರಶಾಂತ ಆನೆ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿದೆ. ನಿಶಾನೆ, ಕುಮ್ಕಿ ಆನೆಗಳು ಪ್ರಶಾಂತನಿಗೆ ಸಾಥ್ ನೀಡಿವೆ.

ಜಂಬೂಸವಾರಿ ಮೆರವಣಿಗೆಯೊಂದಿಗೆ ವಿವಿಧ ಕಲಾತಂಡಗಳು, ಸ್ಥಬ್ಧಚಿತಗಳು ಭಾಗಿಯಾಗಿವೆ. ಜಂಬೂಸವಾರಿ ಮೆರವಣಿಗೆ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೂ ಸಾಗಲಿದೆ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ನಟ-ನಟಿಯರು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.‘ಜಂಬೂಸವಾರಿ’ಗೆ

11 ವಿವಿಧ ದೇಶಗಳ ರಾಯಭಾರಿಗಳು ಭಾಗಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯ ಸೌಂದರ್ಯ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಈ ಬಾರಿ ಅಂತಾರಾಷ್ಟ್ರೀಯ ಮೆರಗು ದೊರೆತಿದೆ. ನಾಡಹಬ್ಬದ ರಾಜಸಭೆಯನ್ನು ಕಣ್ಣುಂಬಿಕೊಳ್ಳಲು ಮೈಸೂರು ದಸರಾ ಉತ್ಸವ ಸಮಿತಿಯ ವಿಶೇಷ ಆಹ್ವಾನದ ಮೇರೆಗೆ ವಿಶ್ವದ 11 ವಿವಿಧ ದೇಶಗಳ ರಾಯಭಾರಿಗಳು ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ಗಣ್ಯರು ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದು, ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡಿದ್ದಾರೆ.

16 ಜಿಲ್ಲೆಗಳು ಹಾಗೂ ಹೊರ ರಾಜ್ಯಗಳ ಟ್ಯಾಬ್ಲೋಗಳ ಮೆರವಣಿಗೆ
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂತಿಮ ಘಟ್ಟವಾದ ಐತಿಹಾಸಿಕ ‘ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ಸಾಗುವ ಈ ಬೃಹತ್ ಮೆರವಣಿಗೆಯು ಈ ಬಾರಿ ಹಿಂದೆಂದಿಗಿಂತಲೂ ಅತ್ಯಂತ ವೈಭವೋಪೇತವಾಗಿ ಮೂಡಿಬಂದಿದೆ.

ನಾಡಿನ ಕಲೆ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಅನಾವರಣಕ್ಕಾಗಿ ಒಟ್ಟು 60 ಸ್ತಬ್ಧಚಿತ್ರಗಳು ಹಾಗೂ 50ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಈ ಬಾರಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿವೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button