ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಕಲ ತಯಾರಿ ನಡೆಸಿದ್ದು, ಪಕ್ಷ ಸಂಘಟನೆ ಕುರಿತು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಮಮ್ಮೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರಿಣಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಈ ಹಿಂದೆ ಆಪರೇಷನ್ ಕಮಲ ಮಾಡಿದಾಗ ಜನರು ಪ್ರಶ್ನೆ ಮಾಡುತ್ತಿದ್ದರು. ಬೇರೆ ಪಕ್ಷದವರನ್ನು ಸೆಳೆದು ಅಧಿಕಾರಕ್ಕೆ ಬರುವುದೇ? ಎಂದು ಕೇಳುತ್ತಿದ್ದರು. ಆದರೆ ರಾಜಕೀಯ ಪಕ್ಷ ಅಧಿಕಾರ ಹಿಡಿಯಬೇಕು ಎಂದರೆ ಆಪರೇಷನ್ ಕಮಲ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿರಬಹುದು. ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತನನ್ನೂ ಶಾಸಕನನ್ನಾಗಿ ಮಾಡುತ್ತೇವೆ. ಪರಿವಾರವಾದ ನಮ್ಮಲ್ಲಿಲ್ಲ. ಭ್ರಷ್ಟಾಚಾರ, ಭಯೋತ್ಪಾದನೆ, ಕುಟುಂಬ ರಾಜಕಾರಣ ಕಾಂಗ್ರೆಸ್ ಕೊಡುಗೆ. ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆ, ಪಕ್ಷ ನಿಷ್ಠೆ ಬಿಜೆಪಿ ಸಿದ್ಧಾಂತ. ಚಹಾ ಮಾರುವ ಹುಡುಗ ದೇಶದ ಪ್ರಧಾನಿಯಾಗಬಲ್ಲ. ಮತಗಟ್ಟೆ ಅಧ್ಯಕ್ಷರಾಗಿದ್ದ ಅಮಿತ್ ಶಾ ಕೇಂದ್ರ ಗೃಹ ಮಂತ್ರಿಯಾಗಿದ್ದಾರೆ. ಹಳ್ಳಿಯಿಂದ ಬಂದ ಸಾಮಾನ್ಯ ವ್ಯಕ್ತಿ ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತಾನೆ. ಮೂರು ಬಾರಿ ಸಂಸದರಾಗುತ್ತಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ಈಗಾಗಲೇ ಐಸಿಯುನಲ್ಲಿದೆ. ಚುನಾವಣೆ ವೇಳೆಗೆ ಸತ್ತು ಹೋಗುತ್ತೆ. ಪಕ್ಷವನ್ನೇ ಮುನ್ನಡೆಸಲು ಸಾಧ್ಯವಾಗದವರು ಇನ್ನು ನಾಡನ್ನು ಹೇಗೆ ಕಟ್ಟಿ ಮುನ್ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.
ನಾಳೆಯಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ