ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರೊಬ್ಬರು ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಿಮ್ಮೇಗೌಡ (67) ಮೃತ ವ್ಯಕ್ತಿ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ತಿಮ್ಮೇಗೌಡ ಮೆಟ್ರೋ ರೈಲು ಹತ್ತಿದ್ದರು. ಕೆಲ ಸಮಯದಲ್ಲೇ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ರೈಲು ತಲುಪಿದಾಗ ಸಾರ್ವಜನಿಕರು ಅವರನ್ನು ರೈಲಿನಿಂದ ಹೊರ ತಂದು ಫ್ಲಾಟ್ ಫಾರಂ ಮೇಲೆ ಕೂರಿಸಿದ್ದಾರೆ.
ವ್ಯಕ್ತಿ ಫ್ಲಾಟ್ ಫಾರ್ಮ್ ಮೇಲೆ ಕುಳಿತು ಒದ್ದಾಡುತ್ತಿದ್ದರೂ ಮೆಟ್ರೋ ಸಿಬ್ಬಂದಿಗಳಾಗಲಿ, ಅಧಿಕಾರಿಗಳಾಗಲಿ ಅವರತ್ತ ಗಮನ ಕೊಟ್ಟಿಲ್ಲ. ಕೆಲ ಹೊತ್ತಿನ ಬಳಿಕ ಅವರನ್ನು ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ತಿಮ್ಮೇಗೌಡ ಕೊನೆಯುಸಿರೆಳೆದಿದ್ದಾರೆ.
ಈ ಆಘಾತಕಾರಿ ಘಟನೆ ಬೆನ್ನಲ್ಲೇ ಸರವಜನಿಕರು ಮೆಟ್ರೋ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋದಲ್ಲಿ ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆಯಾದರೆ ಕೇಳುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ