Film & EntertainmentKannada NewsKarnataka NewsLatest

*ನಾನಾ ಪಾಟೇಕರ್‌ಗೆ ಹೃದಯ ಸ್ತಂಭನ*: *75ನೇ ವಯಸ್ಸಿನಲ್ಲಿ ಹಿರಿಯ ನಟ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗೋವಾದ ನಿವಾಸದಲ್ಲಿ ಗುರುವಾರ ಬೆಳಗ್ಗೆ ತೀವ್ರ ಹೃದಯ ಸ್ತಂಭನ ಉಂಟಾಗಿದ್ದು, ಆಸ್ಪತ್ರೆಗೆ ಕರೆದೊಯ್ದ ಬಳಿಕ ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಬೆಳಗ್ಗೆ ಸುಮಾರು 5.20ರ ವೇಳೆಗೆ ನಾನಾ ಪಾಟೇಕರ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಮಣಿಪಾಲ್ ಆಸ್ಪತ್ರೆಯ ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ನೀಡಿರುವ ಮಾಹಿತಿಯಂತೆ, ನಿರಂತರ ಸಿಪಿಆರ್‌ ಬಳಿಕವೂ ಸ್ಪಂದನೆ ದೊರೆಯದೆ ಮೃತಪಟ್ಟಿದ್ದಾರೆ.

ನಿಧನದ ನಿಖರ ಕಾರಣ ತಿಳಿಯಲು ಪ್ರಕರಣವನ್ನು ಮೆಡಿಕೋ-ಲೀಗಲ್ ಕೇಸ್‌ ಆಗಿ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ತಮ್ಮ ಖಡಕ್ ಸಂಭಾಷಣೆ, ವಿಶಿಷ್ಟ ಅಭಿನಯ ಹಾಗೂ ಪಾತ್ರಗಳಿಗೆ ತೀವ್ರತೆಯನ್ನು ತುಂಬುವ ಶೈಲಿಯಿಂದ ನಾನಾ ಪಾಟೇಕರ್ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ‘ಪರಿಂಧಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್‌ಕಮ್’, ‘ನಟಸಾಮ್ರಾಟ್’ ಸೇರಿದಂತೆ ಹಲವು ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದರು.

‘ಪರಿಂಧಾ’, ‘ಕ್ರಾಂತಿವೀರ್’ ಮತ್ತು ‘ಅಗ್ನಿಸಾಕ್ಷಿ’ ಚಿತ್ರಗಳ ಅಭಿನಯಕ್ಕಾಗಿ ನಾನಾ ಪಾಟೇಕರ್ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು. ಚಿತ್ರರಂಗದ ಜೊತೆಗೆ ಮರಾಠಿ ರಂಗಭೂಮಿಯಲ್ಲೂ ದಶಕಗಳ ಕಾಲ ಸಕ್ರಿಯರಾಗಿದ್ದರು.

ಕನ್ನಡ ಚಿತ್ರರಂಗದಲ್ಲೂ ನಾನಾ ಪಾಟೇಕರ್ ಅಭಿನಯಿಸಿದ್ದರು. 2010ರಲ್ಲಿ ಬಿಡುಗಡೆಯಾದ ‘ಯಕ್ಷ’ ಚಿತ್ರದಲ್ಲಿ ಯೋಗರಾಜ್ ಪುಲಕೇಶ್ ಎಂಬ ಖಡಕ್ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟ ಮಕರಂದ್ ಅನಾಸ್ಪುರೆ ಜೊತೆಗೂಡಿ ‘ನಾಮ್ ಫೌಂಡೇಶನ್’ ಸ್ಥಾಪಿಸಿದ್ದ ನಾನಾ ಪಾಟೇಕರ್, ಮಹಾರಾಷ್ಟ್ರದ ಬರಪೀಡಿತ ರೈತರು ಹಾಗೂ ಕುಟುಂಬಗಳಿಗೆ ನೆರವು ನೀಡುವ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ನಾನಾ ಪಾಟೇಕರ್ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಗಣ್ಯರು ಮತ್ತು ಅಭಿಮಾನಿಗಳಿಂದ ಸಂತಾಪ ವ್ಯಕ್ತವಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button