ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ವತಿಯಿಂದ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ವಿವಿಧ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಂದಿನಿ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ಅವರ ತಂದೆ ವಿ.ಎಲ್. ಪಾಟೀಲ ಅವರು ಸಂಸ್ಥಾಪಿಸಿದ ಅಸೋಸಿಯೇಶನ್ ಸೈಕ್ಲಿಂಗ್ ಪಟುಗಳಿಗೆ ತರಬೇತಿ ನೀಡುವ ಕಾರ್ಯ ನಿರ್ವಹಿಸುತ್ತ ಬಂದಿದೆ. 15 ಸದಸ್ಯರನ್ನು ಒಳಗೊಂಡ ಅಸೋಸಿಯೇಶನ್ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡುತ್ತ ಬಂದಿದೆ.
ಜಿಲ್ಲೆಯ ಆಸಕ್ತ ಸೈಕ್ಲಿಂಗ್ ಪಟುಗಳಿಗೆ ತರಬೇತಿ ನೀಡಲು ಅಸೋಸಿಯೇಶನ್ ಮುಂದೆ ಬಂದಿದ್ದು ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಯ 15 ಶೈಕ್ಷಣಿಕ ತಾಲೂಕುಗಳ ಪ್ರೌಢಶಾಲೆಗಳ 8ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲು ಯೋಜಿಸಲಾಗಿದೆ.
ಈ ದಿಸೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದವರು ಅಸೋಸಿಯೇಶನ್ ಸಹಯೋಗದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಲು ಮುಂದೆ ಬಂದಿದ್ದಾರೆ. ತಾಲೂಕು ಮಟ್ಟದ ಪ್ರೌಢಶಾಲೆಗಳಿಂದ 50 ವಿದ್ಯಾರ್ಥಿಗಳು, 25 ವಿದ್ಯಾರ್ಥಿನಿಯರು ಸೇರಿ ಒಟ್ಟು 75 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರತಿ ತಾಲೂಕಿನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು.
ಮುಂಬರುವ ದಿನಗಳಲ್ಲಿ ಇವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುವಂತೆ ತರಬೇತಿ ನೀಡುವುದಾಗಿ ಅಸೋಸಿಯೇಶನ್ ಅಧ್ಯಕ್ಷ ಅನಿಲ ಪೋತದಾರ ತಿಳಿಸಿದ್ದಾರೆ.
ಸೈಕ್ಲಿಂಗ್ ಸ್ಪರ್ಧೆಯ ವೇಳಾಪಟ್ಟಿ ಮತ್ತು ಇತರ ವಿವರಗಳು ಇಂತಿವೆ:
ಡಿಸೆಂಬರ್ 1ರಂದು ಖಾನಾಪುರ, 3ರಂದು ಹುಕ್ಕೇರಿ, 5ರಂದು ನಿಪ್ಪಾಣಿ, 8ರಂದು ಕಿತ್ತೂರು, 10ರಂದು ಗೋಕಾಕ, 12ರಂದು ಕಾಗವಾಡ, 14ರಂದು ಬೆಳಗಾವಿ ಗ್ರಾಮೀಣ, 16ರಂದು ಮೂಡಲಗಿ, 18ರಂದು ಅಥಣಿ, 20ರಂದು ಬೈಲಹೊಂಗಲ, 22ರಂದು ಸವದತ್ತಿ, 24ರಂದು ರಾಯಬಾಗ, 26ರಂದು ರಾಮದುರ್ಗ, 28ರಂದು ಬೆಳಗಾವಿ ನಗರ, 30ರಂದು ಚಿಕ್ಕೋಡಿಯಲ್ಲಿ ಸ್ಪರ್ಧೆಗಳು ನಡೆಯಲಿವೆ.
ಆಯಾ ತಾಲೂಕಿನ ಸ್ಪರ್ಧಾಳುಗಳು ನಿಗದಿತ ದಿನದಂದು ಬೆಳಗ್ಗೆ 9ಕ್ಕೆ ಸ್ಥಳದಲ್ಲಿ ಹಾಜರಿರಬೇಕು. 10 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ.
ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಾಖಲೆಯ ಅಂಕಗಳ ಏರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ