ಮಹಿಳೆಯರಿಗೆ ಹಾಗೂ ಯುವಕರಿಗೆ ಸ್ವಯಂ ಉದ್ಯೋಗ: ಸಿಎಂ ಬೊಮ್ಮಾಯಿ ಭರವಸೆ
ಪ್ರಗತಿವಾಹಿನಿ ಸುದ್ದಿ; ಮೈಸೂರು: ಮುಂದಿನ ದಿನಗಳಲ್ಲಿ ನಂಜನಗೂಡು ಕ್ಷೇತ್ರ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ, ನುಗು ಹಾಗೂ ಹೇಡಿಯಾಳ ಏತ ನೀರಾವರಿ ಯೋಜನೆಗೆ ಚಾಲನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಕಬಿನಿ ಏತನೀರಾವರಿ ಪ್ರಾರಂಭಿಸಿ ಬಲದಂಡೆ ಕಾಲುವೆ ಕಾಮಗಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಬೇರೆ ಸರ್ಕಾರಗಳು ಗುಂಡ್ಲುಪೇಟೆ, ಚಾಮರಾಜಪೇಟೆ ಕೆರೆಗಳನ್ನು ತುಂಬಿಸಬೇಕು ಎನ್ನುವ ಬಗ್ಗೆ ಕಾಳಜಿ ಮಾಡಲಿಲ್ಲ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ. ಸಾಮಾಜಿಕ ನ್ಯಾಯ ಭಾಷಣದಿಂದ ಸಿಗುವುದಿಲ್ಲ. ನಮ್ಮ ಸರ್ಕಾರ ದುರ್ಬಲ ವರ್ಗದವರಿಗೆ ಸಮಾನ ಅವಕಾಶಗಳನ್ನು ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಎಲ್ಲ ವರ್ಗದವರಲ್ಲಿ ಜಾಗೃತಿ ಮೂಡುತ್ತಿದ್ದು, ಬದಲಾವಣೆ ಪ್ರಾರಂಭವಾಗಿದೆ. ಯಾರು ಎಲ್ಲರನ್ನು ಎದುರಿಸಿ ಬಡವರ ಪರ ನಿಲ್ಲುವವರೇ ನಿಜವಾದ ನಾಯಕ. ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು, ಜಗಜೀವನರಾಂ ತಮ್ಮ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಇವರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾಯಕರು ನಡೆಯಬೇಕು. ಅವಕಾಶ ಸಿಕ್ಕಾಗ ಸಾಮಾಜಿಕ ನ್ಯಾಯ ಒದಗಿಸಬೇಕು. ಇದು ಜನರ ರಾಜಕಾರಣ. ಆದರೆ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುವವರೂ ಇದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ನಂಜನಗೂಡು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂದರು.
ಮಹಿಳೆಯರಿಗೆ ಹಾಗೂ ಯುವಕರಿಗೆ ಸ್ವಯಂ ಉದ್ಯೋಗ :
ನೂರು ಅಂಬೇಡ್ಕರ್ ಹಾಸ್ಟೆಲ್ ಗಳನ್ನು ಒಂದೇ ವರ್ಷದಲ್ಲಿ ನಿರ್ಮಿಸುವ ತೀರ್ಮಾನ ಮಾಡಲಾಗಿದೆ. 50 ಕನಕದಾಸ ಹಾಸ್ಟೆಲ್ , 5 ಮೆಗಾ ಹಾಸ್ಟೆಲ್‍ಗಳನ್ನು ಈ ವರ್ಷ ಪ್ರಾರಂಭ ಮಾಡುತ್ತಿದ್ದೇವೆ. ಪ್ರಮುಖ ಶಿಕ್ಷಣ ಕೇಂದ್ರಗಳಾದ ಬೆಂಗಳೂರು, ಮಂಗಳೂರು, ಗುಲ್ವರ್ಗಾ,ಹುಬ್ಬಳ್ಳಿ,ಮೈಸೂರಿನಲ್ಲಿ ಮೆಗಾ ಹಾಸ್ಟೆಲ್ ನ್ನು ನಿರ್ಮಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಒಟ್ಟು 5 ಸಾವಿರ ಮಕ್ಕಳಿಗೆ ಮೆಗಾ ಹಾಸ್ಟೆಲ್ ಗಳಲ್ಲಿ ವಸತಿ ಕಲ್ಪಿಸಲಾಗುವುದು. ಮಹಿಳೆಯರ ಹಾಗೂ ಯುವಕರ ಸ್ವಯಂ ಉದ್ಯೋಗಕ್ಕಾಗಿ ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಪ್ರತಿ ಗ್ರಾಮದಲ್ಲಿ ಎರಡು ಸಂಘಗಳಿಗೆ 5 ಲಕ್ಷರೂ. ಆರ್ಥಿಕ ಸಹಾಯ ಮಾಡಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ಆರ್ಥಿಕವಾಗಿ ಸಬಲಗೊಳಿಸಲಾಗುತ್ತಿದೆ ಎಂದರು.
ತಳಸಮುದಾಯದವರಿಗೆ ಶಿಕ್ಷಣ , ಉದ್ಯೋಗ, ಸಬಲೀಕರಣ :
ಕುಶಲಕರ್ಮಿಗಳಾದ ಕಮ್ಮಾರರು, ಬಡಿಗರು, ಕುಂಬಾರರು, ವಿಶ್ವಕರ್ಮದವರು ಸೇರಿದಂತೆ ವಿವಿಧ ವೃತ್ತಿಯವರಿಗೆ ಕಾಯಕ ಯೋಜನೆಯಡಿ ಆರ್ಥಿಕ ಸಹಾಯ ನೀಡಿ ಅವರ ಕಾಯಕದಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಲಾಗುತ್ತಿದೆ. ದುಡಿಮೇಯೇ ದೊಡ್ಡಪ್ಪ ಎಂದು ನಂಬಿರುವ ಸರ್ಕಾರ ದುಡಿಯುವ ವರ್ಗಕ್ಕೆ ಬಲ ತುಂಬಲಾಗುತ್ತಿದೆ.ತಳಸಮುದಾಯದವರಿಗೆ ಶಿಕ್ಷಣ , ಉದ್ಯೋಗ, ಸಬಲೀಕರಣ ಒದಗಿಸಲಾಗುತ್ತಿದೆ. 10 ಲಕ್ಷ ರೈತಮಕ್ಕಳಿಗೆ ರೈತವಿದ್ಯಾನಿಧಿ, 6 ಲಕ್ಷ ರೈತ ಕೂಲಿ ಕಾರ್ಮಿಕರ ಮಕ್ಕಳಿಗೆ, ನೇಕಾರರು, ಮೀನುಗಾರರು, ಆಟೋ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಭದ್ರ ಬುನಾದಿಯನ್ನು ಹಾಕಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿರುವ ಸರ್ಕಾರ, ಡಯಾಲಿಸಿಸ್ ಸೈಕಲ್ ಹೆಚ್ಚಿಸಿದೆ, ಕ್ಯಾನ್ಸರ್ ಚಿಕಿತ್ಸೆ ಹೆಚ್ಚಿಸಲಾಗಿದೆ. ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ಭತ್ಯೆ ಸರ್ಕಾರದಿಂದ ನೀಡಲಾಗು್ತಿದೆ. ಕಿವಿ ಕೇಳದವರಿಗೆ ಶ್ರವಣ ಯಂತ್ರ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಕಣ್ಣಿನ ಚಿಕಿತ್ಸೆ ಮಾಡಿ ಕನ್ನಡಕವನ್ನು ನೀಡಲಾಗುತ್ತಿದೆ ಎಂದರು.
30 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಕೆಲಸ
ನಂಜನಗೂಡು ಪ್ರವಿತ್ರ ಭೂಮಿ. ನಾಡಿನ ಕಲ್ಯಾಣ ಇದರ ಮೂಲಕ ಆಗುವ ಪುಣ್ಯ ಭೂಮಿ. ಶಾಸಕರಾದ ಹರ್ಷವರ್ಧನ್ ಟೊಂಕಕಟ್ಟಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಾಸಕರಾಗಿದ್ದು, ಜನೋಪಯೋಗಿ ಜನನಾಯಕರಾಗಿದ್ದಾರೆ. ನುಗು ಏತ ನೀರಾವರಿ ಮುಖ್ಯ ಕಾಲುವೆ ಸರಿಯಾಗಿರಲಿಲ್ಲ. ಜಲಸಂಪನ್ಮೂಲ ಸಚಿವರಿದ್ದ ಸಂದರ್ಭದಲ್ಲಿ ಅದರ ಕಾಲುವೆ ಸರಿಪಡಿಸಿ ನೀರು ಹರಿಸಿದ್ದೇನೆ ಎಂದು ಸ್ಮರಿಸಿದರು. ಈ ಭಾಗದ 7 ಕೆರೆಗಳನ್ನು ತುಂಬಿಸಲು ಸಾಧ್ಯವಾಗಿರಲಿಲ್ಲ. ನೀರಾವರಿಯಲ್ಲಿ ಸಾಧ್ಯವಾಗುವುದಿಲ್ಲವೆಂದು ಮನಗಂಡು ನೀರು ಎತ್ತಲು 30 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಕೆಲಸವಾಗುತ್ತಿದೆ. ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಶಾಸಕ ಹರ್ಷವರ್ಧನ್ ಬೇರೆ ಉಪಾಯಗಳನ್ನು ಮಾಡಿ ರೈತರಿಗೆ ಉಪಯೋಗವಾಗುವ ಕೆಲಸ ಮಾಡಿದ್ದಾರೆ ಎಂದರು.
ಸಿದ್ರಾಮುಲ್ಲಾಗೆ ಖುಷಿಯಾಗುವುದನ್ನೇ ಹೇಳಿದ್ದೇನೆ ಎಂದ ಸಿ.ಟಿ.ರವಿ
https://pragati.taskdun.com/c-t-ravireactionsidramullakhanstatment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ