Kannada NewsLatestPragativahini Special

ದೇವಿಯರ ಹಬ್ಬ ನವರಾತ್ರಿ

ವಿಶ್ವಾಸ ಸೋಹೋನಿ
ನವರಾತ್ರಿ, ಮಹಾನವಮಿ, ಹೆಸರುಗಳಿಂದ ಆಚರಿಸಲ್ಪಡುವ ಈ ಹಬ್ಬ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಆಯಾಮಗಳನ್ನು ಹೊಂದಿದೆ. ಸಾಮಾಜಿಕ ಐಕ್ಯವನ್ನು ತರುವ ಒಂದು ಮಹಾ ಹಬ್ಬವಾಗಿದೆ. ಈ ಹಬ್ಬಕ್ಕೆ ವಿಶೇಷವಾದ ಐತಿಹಾಸಿಕ ಪರಂಪರೆ, ಚಾರಿತ್ರಿಕ ಆಧಾರ, ಪೌರಾಣಿಕ ಹಿನ್ನೆಲೆ ಹಾಗೂ ತನ್ನದೇ ಆದ ಮಹತ್ವಗಳಿವೆ.ಸರ್ವಮತ ಪಂಥಗಳ ಬಂಧು-ಬಾಂಧವರು ಒಂದಾಗಿ ಆಚರಿಸುವ ಶಕ್ತಿ ಆರಾಧನೆಯ ಹಬ್ಬ. ಉತ್ತರಭಾರತದಲ್ಲಿ ದುರ್ಗಾಪೂಜೆ ವಿಶೇಷವೆನಿಸಿದರೆ ದಕ್ಷಿಣಭಾರತದಲ್ಲಿ ಚಾಮುಂಡಿಯ ಆರಾಧನೆ ವಿಶಿಷ್ಟವಾದುದು. ಕರ್ನಾಟಕದಲ್ಲಿ ನಾಡಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ವಿಜಯನಗರದ ಅರಸರು ಹಂಪಿಯ ಮಹಾನವಮಿ ದಿಬ್ಬದಲ್ಲಿ ಅಂದಿನ ಕಾಲಘಟ್ಟದಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನಾನಂತರ ಪ್ರವರ್ಧಮಾನಕ್ಕೆ ಬಂದ ಮೈಸೂರು ಒಡೆಯರ ಮನೆತನದವರು ದಸರಾ ಉತ್ಸವಕ್ಕೆ ಸಾಂಸ್ಕೃತಿಕ ಆಯಾಮವನ್ನೇ ನೀಡಿದರು. ಈ ಪರಂಪರೆಯನ್ನು ಇಂದಿನವರೆಗೂ ಅವ್ಯಾಹತವಾಗಿ ಸಾಗಿಸಿಕೊಂಡು ಬಂದ ಕೀರ್ತಿ ಮೈಸೂರಿನ ಒಡೆಯರಿಗೆ ಸಲ್ಲುತ್ತದೆ. ಮೈಸೂರಿನ ಮಹಾರಾಜರ ಕಾಲದಲ್ಲಿ ಮಹಾರಾಜರ ಮೆರವಣಿಗೆ ಜಗತ್ಪ್ರಸಿದ್ಧವಾಗಿತ್ತು. ಕ್ರಿ.ಶ. ೧೬೧೦ ರಲ್ಲಿ ರಾಜ ಒಡೆಯರ್ ಅವರಿಂದ ಆರಂಭಿಸಲಾದ ಜಂಬೂಸವಾರಿ ಇಂದಿಗೂ ದಸರೆಯ ಪ್ರಮುಖ ಆಕರ್ಷಣೆಯಾಗಿ ನವರಾತ್ರಿಯ ವಿಶೇಷತೆಯಾಗಿ ಗಮನ ಸೆಳೆಯುತ್ತದೆ. ಈಗ ಅದು ಸರಕಾರದಿಂದ ನಡೆಸುವ ಭುವನೇಶ್ವರಿಯ ಮೆರವಣಿಗೆಯಾಗಿದೆ. ಜಂಬೂಸವಾರಿ, ದೀಪಾಲಂಕಾರ, ಲಲಿತ ಕಲೆಗಳ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ೧೦ ದಿನಗಳಕಾಲ ನಡೆಯುವ ದಸರಾ ಮಹೋತ್ಸವ ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತದೆ.
ಹಳೇ ಮೈಸೂರ ಭಾಗದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಕೂಡಿಸಿ ಜನರನ್ನು ಆಮಂತ್ರಿಸಿ ಹಾಡು ಹೇಳುತ್ತಾರೆ. ಕರ್ನಾಟಕದ ಉತ್ತರಭಾಗದಲ್ಲಿ ಇದನ್ನು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಒಂಬತ್ತು ದಿನಗಳವರೆಗೂ ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸಿ ಸಾಹಿತ್ಯದ ಹಬ್ಬವನ್ನಾಗಿ ಮಾಡುತ್ತಾರೆ.
ದೇವಿ ಉಪಾಸನೆಗೆ ನವರಾತ್ರಿ ಅತ್ಯಂತ ಮಹತ್ವದ ಪರ್ವ. ಇದು ಶಕ್ತಿ ಆರಾಧನೆಯ ಹಬ್ಬ. ಜಗನ್ಮಾತೆಯು ಚಂಡಿಯಾಗಿ, ಚಾಮುಂಡಿಯಾಗಿ ಮಹಾಲಕ್ಷ್ಮಿಯಾಗಿ ಭಾರತಿಯಾಗಿ ಹೀಗೆ ಇನ್ನೂ ಬೇರೆ ಬೇರೆ ಅವತಾರಗಳಲ್ಲಿ ಅನೇಕ ದೈತ್ಯರ ಸಂಹಾರವನ್ನು ಮಾಡಿದ ಕಥೆಯುಳ್ಳ ದೇವಿ ಮಹಾತ್ಮೆ ಪುರಾಣವನ್ನು ಅಥವಾ ಸಪ್ತಶತಿಯನ್ನು ದೇವಾಲಯಗಳಲ್ಲಿ, ಮನೆ ಮನೆಗಳಲ್ಲಿ ಪಾರಾಯಣ ಮಾಡುತ್ತಾರೆ. ಆಸ್ತಿಕರು ಈ ಅವಧಿಯಲ್ಲಿ ದೇವಿ ಮಹಾತ್ಮೆಯನ್ನು ಪಾರಾಯಣ ಮಾಡಿ ವಿಜಯದಶಮಿಯಂದು ಸಂಪನ್ನಗೊಳಿಸುತ್ತಾರೆ. ದೇವಿ ಮಹಾತ್ಮೆ ಎಂಬುದು ಲೋಕೋತ್ತರವಾದ ಚರಿತ್ರೆ. ಇದಕ್ಕೆ ದುರ್ಗಾಸಪ್ತಶತಿ ಎಂಬ ಹೆಸರೂ ಇದೆ. ಮಾರ್ಕಂಡೇಯ ಪುರಾಣದ ೧೩ ಅಧ್ಯಾಯಗಳಲ್ಲಿ ೭೦೦ ಶ್ಲೋಕಗಳನ್ನೊಳಗೊಂಡ ಜಗನ್ಮಾತೆಯಾದ ದೇವಿಯ ಅದ್ಭುತ ಕಥೆ ಹಾಗೂ ವರ್ಣನೆಗಳು ಎಲ್ಲರನ್ನೂ ರೋಮಾಂಚನಗೊಳಿಸುವಂಥದ್ದು. ಅದರಲ್ಲಿ ಮಾರ್ಕಂಡೇಯ ಮುನಿ ತನ್ನ ಶಿಷ್ಯ ಕ್ರೌಷ್ಟುಕಿಗೆ ದೇವಿ ಮಹಾತ್ಮೆಯನ್ನು ವಿವರಿಸಿರುತ್ತಾರೆ. ಇದರಲ್ಲಿ ಮೂರು ಮನೋಜ್ಞವಾದ ಚರಿತ್ರೆಗಳಿವೆ. ಇದು ತ್ರಿಗುಣಾತ್ಮಕವಾದ ತಮೋ, ರಜೋ, ಸತ್ವಗುಣಗಳನ್ನು ಪ್ರತಿನಿಧಿಸುವಂಥದ್ದು, ಪ್ರಥಮಚರಿತ್ರೆ ಮಹಾಕಾಳಿಗೆ ಸಂಬಂಧಿಸಿದ್ದು, ದ್ವಿತೀಯ ಚರಿತ್ರೆ ಮಹಾಲಕ್ಷ್ಮಿಗೆ ಸಂಬಂಧಪಟ್ಟದ್ದು. ತೃತೀಯಾಧ್ಯಾಯ ಮಹಾಸರಸ್ವತಿಗೆ ವಿನಯೋಗಿತವಾಗಿದೆ. ಅವುಗಳಲ್ಲಿ ಕೆಲವು ಕಥೆಗಳೆಂದರೆ ಮಧು-ಕೈಟಭರ ವಧೆ, ಮಹಿಷಾಸುರವಧೆ, ಚಂಡ-ಮುಂಡ ಹಾಗೂ ಶುಂಭ-ನಿಶುಂಭರ ವಧೆ. ಹೀಗೆ ದುಷ್ಟ ಶಕ್ತಿಯನ್ನು ಸಂಹರಿಸುವ ಮಹಾಸರಸ್ವತಿಯ ಶಕ್ತಿಯನ್ನು ವರ್ಣಿಸಲಾಗುತ್ತದೆ.
ಮಧು-ಕೈಟಭರ ವಧೆ:
ಕಲ್ಪಾಂತರದಲ್ಲಿ ಬ್ರಹ್ಮಾಂಡವೆಲ್ಲವೂ ಜಲಮಯವಾಗಿತ್ತು. ಆಗ ಭಗವಂತನಾದ ನಾರಾಯಣನು ಆದಿಶೇಷನ ಮೇಲೆ ಮಲಗಿದ್ದಾಗ ಮಹಾವಿಷ್ಣುವಿನ ಕರ್ಣದಿಂದ ಮಧು-ಕೈಟಭರೆಂಬ ಅಸುರರು ಹುಟ್ಟುತ್ತಾರೆ. ಅವರು ಸೃಷ್ಟಿಕರ್ತನಾದ ಬ್ರಹ್ಮನನ್ನೇ ಕೊಲ್ಲಲು ಮುಂದಾಗುತ್ತಾರೆ. ಆಗ ಬ್ರಹ್ಮನು ತಾಮಸೀಗುಣ ಪ್ರಧಾನಳಾದ ಯೋಗನಿದ್ರಾದೇವಿಯನ್ನು ಪ್ರಾರ್ಥಿಸಿ ಆಕೆಯ ಮೂಲಕ ವಿಷ್ಣುವನ್ನು ಎಚ್ಚರಗೊಳಿಸುತ್ತಾನೆ. ಎಚ್ಚರಗೊಂಡ ಮಹಾವಿಷ್ಣುವು ಉದ್ಧಟರಾದ ಮಧು-ಕೈಟಭರನ್ನು ಸಂಹಾರ ಮಾಡುತ್ತಾನೆ. ವಿಷ್ಣುವಿನ ಮೂಲಕ ಈ ಅಸುರರ ನಾಶಕ್ಕೆ ಕಾರಣಳಾದ ಈ ದೇವಿಗೆ ಮಧುಕೈಟಭನಾಶಿನಿ ಎಂಬ ಹೆಸರು ಬರುತ್ತದೆ. ಇದು ದೇವಿ ಮಹಾತ್ಮೆಯಲ್ಲಿ ಬರುವ ಪ್ರಥಮ ಚರಿತ್ರೆ ಮಹಾಕಾಳಿಗೆ ಸಂಬಂಧಿಸಿದ್ದು.
ಮಹಿಷಾಸುರವಧೆ
ಮಹಿಷಾಸುರ ಒಬ್ಬ ದೊಡ್ಡ ದೈತ್ಯ. ಅವನ ಉಪಟಳದಿಂದ ಮೂರು ಲೋಕಗಳು ತತ್ತರಿಸಿದವು. ದೇವತೆಗಳೂ ಸ್ಥಾನ ಭ್ರಷ್ಟ್ರರಾದರು. ತ್ರಿಮೂರ್ತಿಗಳು ಏಕಾಕಿಯಾಗಿ ಅವನ್ನು ಎದುರಿಸದಾದರು. ಆಗ ಎಲ್ಲರೂ ಒಟ್ಟುಗೂಡಿ ಚಿಂತನೆ ನಡೆಸಿದಾಗ ಒಬ್ಬೊಬ್ಬರಿಂದ ಒಂದೊಂದು ತೇಜಸ್ಸಿನ ಅಂಶ ಹೊರಬಂದು ಮಹಾಲಕ್ಷ್ಮಿಯ ಅವತಾರವಾಯಿತು. ದೇವತೆಗಳು ತಮ್ಮ ತಮ್ಮ ಆಭರಣಗಳಿಂದ ಅಲಂಕರಿಸಿದರು. ತಮ್ಮ ತಮ್ಮ ಆಯುಧಗಳನ್ನು ಕೊಟ್ಟು ಬಲಪಡಿಸಿದರು. ಹೀಗೆ ಸಮಷ್ಟಿ ಶಕ್ತಿ ಪಡೆದ ಮಹಾಲಕ್ಷ್ಮಿ ಮಹಿಷನನ್ನು ಸಂಹರಿಸಿದಳು.
ಈ ಕಥೆಗಳಿಂದ ನಾವು ತಿಳಿದುಕೊಳ್ಳಬಹುದಾದ ತತ್ವವೆಂದರೆ ನಮ್ಮನ್ನು ತೊಂದರೆಗೆ ಒಳಪಡಿಸುವ ಸಮಸ್ಯೆಗಳಾದ ಬಡತನ, ಅಜ್ಞಾನ ಮತ್ತು ನಿರುದ್ಯೋಗ ಮುಂತಾದವುಗಳೆಲ್ಲವೂ ಒಂದು ಮಹಿಷನ ರೂಪ. ಈ ಎಲ್ಲ ಸಮಸ್ಯೆಗಳ ನಿವಾರಣೆ ವ್ಯಕ್ತಿಗತ ಪ್ರಯತ್ನದಿಂದ ಸಾಧ್ಯವಾಗದು. ಅದಕ್ಕೆ ಎಲ್ಲರ ಸಂಕಲ್ಪಶಕ್ತಿಯಿಂದ ಉದಯಿಸುವ ಸಂಘ ಶಕ್ತಿ ಬೇಕು ಈ ಸಂಘಶಕ್ತಿಯೇ ಮಹಾಲಕ್ಷ್ಮೀ. ಈ ಶಕ್ತಿಯಿಂದ ಹತನಾಗಬೇಕಾದ ದೈತ್ಯಶಕ್ತಿಯೇ ನಮ್ಮ ಅಜ್ಞಾನ, ಬಡತನ ಇತ್ಯಾದಿ. ಹೀಗೆ ನವರಾತ್ರಿ ಅರ್ಥಾತ್ ವಿಜಯದಶಮಿ ನಮ್ಮ ನಿತ್ಯ ಜೀವನದಲ್ಲಿ ನಿತ್ಯ ನಡೆಯುತ್ತಿರಬೇಕು. ದುಷ್ಟ ಶಕ್ತಿ ನಾಶವಾಗಿ ಶಿಷ್ಟ ಶಕ್ತಿ ವೃದ್ಧಿಗೊಂಡಾಗ ನಮ್ಮ ವೈಯುಕ್ತಿಕ ಬದುಕು ಮತ್ತು ಸಾಮಾಜಿಕ ಬದುಕು ಸುಖಕರವಾಗುತ್ತದೆ. ಇದೇ ಈ ವಿಜಯದಶಮಿಯ ಸಂದೇಶ.
ಈ ಹಬ್ಬವು ಅಶ್ವಿಜ ಮಾಸದ ಬಹುಳ ಪಾಡ್ಯಮಿಯಿಂದ ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ಈ ಮಧ್ಯೆ ಬರುವ ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿಗಳಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ.
ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆ. ಅಮಾವಾಸ್ಯೆ ಎಂದರೆ ಕತ್ತಲು, ಈ ಕತ್ತಲಿನಲ್ಲೂ ಮಹಾ+ಲಯ, ಮಹಾ ವಿನಾಶ ಅಂದರೆ ಮಹಾನ ಪರಿವರ್ತನೆ ಆಗುವುದು. ಆ ದಿನ, ಗತಿಸಿದ ಸರ್ವ ಪಿತೃಗಳಿಗೆ ತರ್ಪಣ ಹಾಗೂ ಭಕ್ಷ, ಭೋಜನಾದಿಗಳನ್ನು ಮಾಡಿ ಅರ್ಪಿಸುತ್ತಾರೆ. ಆದರಿಂದ ಈ ದಿನಕ್ಕೆ ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ನವರಾತ್ರಿಯಲ್ಲಿ ಲಲಿತಪಂಚಮಿ ಕೂಡ ಬರುವುದು.
ನವರಾತ್ರಿಯಲ್ಲಿ ದೀಪಹಾಕುವ ಸಂಪ್ರದಾಯವಿರುವದು. ಹೆಣ್ಣುಮಕ್ಕಳು ಆಗ ವೆಂಕಟೇಶ ಪಾರಿಜಾತ ಹಾಡು ಹೇಳುವರು. ದುರ್ಗಾದೇವಿಯನ್ನು ಪ್ರತಿಷ್ಟಾಪಿಸಿ ಘಟ್ಟ ಸ್ಥಾಪನೆ ಮಾಡಿ ದುಷ್ಟ ಶಕ್ತಿಗಾಗಿ ಬೆಳಕು ಬರಲಿ ಎಂದು ಹಾರೈಸುವುದೇ ನಂದಾದೀಪದ ಉದ್ದೇಶ. ಈ ನಿರಂತರ ದೀಪದ ವೃತವನ್ನು ನಿಷ್ಠೆಯಿಂದ ಪಾಲಿಸುವವರು.
ಎಂಟನೆಯ ದಿನ ದುರ್ಗಾಷ್ಟಮಿ. ದುರ್ಗಾಷ್ಟಮಿಗೆ ಶಕ್ತಿಪೂಜೆ, ಮೊದಲಿನ ಎಂಟು ದಿನಗಳಲ್ಲಿ ಶಕ್ತಿ ದೇವತೆಯನ್ನು ಪ್ರತಿದಿನ ಒಂದೊಂದು ವಾಹನದ ಮೇಲೆ ಕೂಡ್ರಿಸಿ ವಿಜೃಂಭಣೆಯಿಂದ ಮೆರೆಯಿಸಲಾಗುತ್ತದೆ. ಲೋಕಕಂಟಕರಾದ ಶುಂಭ-ನಿಶುಂಭರನ್ನು ಸಂಹರಿಸಿ ದೇಶಕ್ಕೆ ಶಾಂತಿಯನ್ನು ಬೀರಿದ ಶಕ್ತಿಯನ್ನು ಪ್ರದರ್ಶಿಸಲಾಗಿದೆ. ವಾರಾಹಿ, ಬ್ರಾಹ್ಮಿ, ಕುಮಾರಿ, ಕತ್ಯಾಯಿನಿ, ಶಾರದಾ, ದುರ್ಗಿ, ಕಾಲರಾತ್ರಿ, ಮಹಾಗೌರಿ, ಲಲಿತಾತ್ರಿ, ಪುರಸುಂದರಿ ಹೀಗೆ ದಿನಕ್ಕೊಂದು ರೂಪದಲ್ಲಿ ದೇವಿಯ ಸ್ವರೂಪವನ್ನು ಆರಾಧಿಸುತ್ತಾ, ವಿಶೇಷ ಭಕ್ಷ್ಯಗಳಿಂದ ನೈವೇದ್ಯಗಳನ್ನರ್ಪಿಸುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವುದು ನವರಾತ್ರಿಯ ಮತ್ತೊಂದು ವಿಶೇಷ.
ಅಶ್ವೀನ-ಕಾರ್ತಿಕ ಮಾಸ ನವರಾತ್ರಿಯಲ್ಲಿ ವಿದ್ಯಾದೇವಿ ಸರಸ್ವತಿಯನ್ನು ಸ್ತುತಿಸಿ ಪುಸ್ತಕ ಪೂಜೆಯನ್ನು ಮಾಡುವ ಪದ್ಧತಿ ಇದೆ. ಮಹಾನವಮಿಯಂದು ಸರಸ್ವತಿ ಪೂಜೆ, ಆಯುಧ ಪೂಜೆ ಅಥವಾ ಖಂಡೆ ಪೂಜೆ ಆಗಬೇಕು. ಅಂದು ನಿತ್ಯ ಉಪಯೋಗಿಸುವ ಯಂತ್ರ, ಸಲಕರಣೆ, ಆಯುಧಗಳನ್ನು ಪೂಜಿಸುವ ಪರಿಪಾಠವಿದೆ. ದೇವಿ ಜಗನ್ಮಾತೆಯು ದುರುಳರಾದ ರಾಕ್ಷಸರನ್ನು ತನ್ನ ಆಯುಧಗಳಿಂದ ಸಂಹಾರ ಮಾಡಿದ ಸ್ಮರಣಾರ್ಥವಾಗಿ ಅಂದು ಆಯುಧಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.
ಆಧುನಿಕ ಮನೋಧರ್ಮದಲ್ಲಿ ನವರಾತ್ರಿಯ ಆಚರಣೆಯನ್ನು ನಾವು ಈ ರೀತಿಯಾಗಿ ಪರಿಭಾವಿಸಬಹುದು. ಇಂದು ಪ್ರತಿಯೊಬ್ಬರಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಮದ, ಮತ್ಸರ ಮುಂತಾದವುಗಳೇ ರಾಕ್ಷಸೀ ಗುಣಗಳಾಗಿವೆ. ಹಾಗಾಗಿ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಮ್ಮಲ್ಲಿರುವ ಅಸುರೀಗುಣಗಳನ್ನು ಸಂಹರಿಸಿ, ವೈವಿ ಗುಣಗಳಾದ ಪವಿತ್ರತೆ, ಸುಖ, ಶಾಂತಿ, ಪ್ರೆಮ, ಆನಂದ, ದಯೆ, ಕರುಣೆ, ಸಂತೊಷ ಮುಂತಾದನ್ನು ಧಾರಣೆ ಮಾಡಬೇಕು. ನವರಾತ್ರಿಯಲ್ಲಿ ವಿಶೇಷವಾಗಿ ದೇವಿಯರ ಆರಾಧಾನೆ ಮತ್ತು ಪೂಜೆ ನಡೆಯುತ್ತದೆ. ದುರ್ಗಾದೇವಿಯ ೮ ಭುಜಗಳು ಅಷ್ಟಶಕ್ತಿಗಳ ಪ್ರತೀಕವಾಗಿವೆ. ಅವುಗಳೆಂದರೆ ಸಹನಶಕ್ತಿ, ಅಳವಡಿಸಿಕೊಳ್ಳುವ ಶಕ್ತಿ, ಪರೀಕ್ಷಿಸಿಕೊಳ್ಳುವ ಶಕ್ತಿ, ನಿರ್ಣಯ ಶಕ್ತಿ, ಧೈರ್ಯ ಶಕ್ತಿ, ಸಹಯೋಗ ಶಕ್ತಿ, ಸಂಕುಚಿತಗೊಳಿಸುವ ಶಕ್ತಿ ಮತ್ತು ಸಂಕ್ಷಿಪ್ತಗೊಳಿಸುವ ಶಕ್ತಿಗಳು. ದೈವಿ ಗುಣಗಳಾದ ಶಾಂತಿ, ಪ್ರೀತಿ ಸ್ನೇಹ, ಮಧುರತೆ, ಆನಂದ, ಮುಂತಾದಗಳನ್ನು ಸ್ವಯಂ ನಿರಾಕಾರ ಪರಮಪಿತ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಕಲಿಸುವ ರಾಜಯೋಗದ ಮೂಲಕ ಜೀವನದಲ್ಲಿ ಅಳವಡಿಸಿಕೊಂಡರೆ ನಾವೂ ಸಹ ದೇವಮಾನವರಾಗಬಹುದು.
ಹಾಗಾದರೆ ಬನ್ನಿ, ನಾವು ಈ ದಸರಾ ಹಬ್ಬದ ಆಧ್ಯಾತ್ಮಿಕ ಹಿನ್ನಲೆಯನ್ನು ತಿಳಿದು, ವಿಶ್ವಪಿತನಾದ ನಿರಾಕಾರ ಭಗವಂತನ ಮಕ್ಕಳು ಎಂಬುದನ್ನು ಅರಿತು, ಪರಸ್ಪರದಲ್ಲಿ ಸ್ನೇಹ ಆತ್ಮಿಯತೆಯನ್ನು ಬೆಳೆಸಿಕೊಂಡು ದುರ್ಗುಣಗಳನ್ನು ಭಸ್ಮಮಾಡಿ ವಿಶ್ವಶಾಂತಿಯ ಉಗಮಕ್ಕೆ ನಾಂದಿಯನ್ನು ಹಾಡೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button