ನವರಾತ್ರಿ, ದೇವಿ ಆರಾಧನೆಯ ವಿಶೇಷ ಹಬ್ಬ, ಒಂಬತ್ತು ದಿನ ದುರ್ಗಾರಾಧನೆಯ ಬಳಿಕ ಹತ್ತನೇ ದಿನ ವಿಜಯದಶಮಿ ಆಚರಣೆಯಾಗಿ ಈ ಹಬ್ಬ ಸಂಪನ್ನಗೊಳ್ಳುತ್ತದೆ. ನವರಾತ್ರಿ ಮತ್ತು ವಿಜಯದಶಮಿಗೆ ಪೂಜೆ ಪುನಸ್ಕಾರಗಳ ಜತೆ ವಿಶೇಷವಾದ ಸಿಹಿ ಕಜ್ಜಾಯಗಳನ್ನು ನೈವೇದ್ಯ ಮಾಡಲಾಗುತ್ತದೆ. ಈ ಬಾರಿ ನವರಾತ್ರಿಗೆ ನೀವು ಮನೆಯಲ್ಲಿ ಸುಲಭದಲ್ಲಿ ತಯಾರಿಸಬಹುದಾದ ಕಜ್ಜಾಯಗಳನ್ನು ಸಹನಾಸ್ ಕಿಚನ್ ನಿಮಗಾಗಿ ಸಾದರಪಡಿಸುತ್ತಿದೆ.
ಪಾತೋಳಿ (ಅರಿಶಿಣೆಲೆ ಕಡುಬು)
ಇದು ಕರಾವಳಿಯ ವಿಶಿಷ್ಟ ಕಜ್ಜಾಯ. ಬಿಸಿ ಬಿಸಿಯಾದ ಪಾತೋಳಿಯನ್ನು ತುಪ್ಪದ ಜೊತೆ ಸವಿಯುವುದು ಸಿಹಿ ಕಜ್ಜಾಯ ಪ್ರಿಯರಿಗೆ ಹಬ್ಬವೋ ಹಬ್ಬ. ಅಕ್ಕಿ , ತೆಂಗಿನಕಾಯಿ ಮತ್ತು ಬೆಲ್ಲ ಮೊದಲಾದ ಸಾತ್ವಿಕ ಪದಾರ್ಥಗಳನ್ನೇ ಒಳಗೊಂಡಿರುವುದು ಮತ್ತು ಉಗಿಯಲ್ಲೇ ಬೇಯಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು
ಅಕ್ಕಿ ೧ ಕಪ್, ಬೆಲ್ಲ ೧ ಕಪ್, ಏಲಕ್ಕಿ ೨ , ಚಿಟಿಕೆ ಉಪ್ಪು, ಹಸಿ ತೆಂಗಿನಕಾಯಿ ತುರಿ ೧ ಕಪ್, ಅರಿಶಿಣ ಎಲೆ ೧೦-೧೨
ಮಾಡುವ ವಿಧಾನ
ಅಕ್ಕಿಯನ್ನು ೨ ತಾಸುಗಳ ಕಾಲ ನೀರಿನಲ್ಲಿ ನೆನೆಸಬೇಕು. ಬಳಿಕ ನೆನೆದ ಅಕ್ಕಿಯನ್ನು ಚನ್ನಾಗಿ ತೊಳೆದು ಏಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಬೇಕು. ರುಬ್ಬಿಕೊಂಡ ಹಿಟ್ಟಿಗೆ ಚಿಟಿಕೆ ಉಪ್ಪು ಮತ್ತು ಅರ್ಧ ಕಪ್‌ಗಿಂತ ಸ್ವಲ್ಪ ಜಾಸ್ತಿ ಬೆಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಕಲೆಸಿ ಇಟ್ಟುಕೊಳ್ಳಬೇಕು.
ಕಲೆಸಿಕೊಂಡ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಗ್ಯಾಸ್ ಮೇಲೆ ಕಾಯಿಸಬೇಕು. ಆಗಾಗ ಕೈ ಆಡಿಸುತ್ತಿರಬೇಕು, (ಕೈ ಆಡಿಸುತ್ತ ಇರದಿದ್ದರೆ ತಳ ಹಿಡಿಯುತ್ತದೆ ) ಹಿಟ್ಟು ಗಟ್ಟಿಯಾಗಿ ರೊಟ್ಟಿ ಹಿಟ್ಟಿನ ಹದಕ್ಕೆ ಬಂದಾಗ ಇಳಿಸಬೇಕು.
ಉಳಿದ ಬೆಲ್ಲಕ್ಕೆ ಹಸಿ ಕೊಬ್ಬರಿ ತುರಿಯನ್ನು ಹಾಕಿ ಕಲೆಸಿ ಇಡಬೇಕು, ತೊಳೆದು ಸ್ವಚ್ಛ ಮಾಡಿಟ್ಟುಕೊಂಡ ಅರಿಶಿಣ ಎಲೆಯ ಹಿಂಭಾಗಕ್ಕೆ ಹದ ಮಾಡಿಕೊಂಡ ಹಿಟ್ಟನ್ನು ಸವರಿ ಅದರ ಮೇಲೆ ಕೊಬ್ಬರಿ ಬೆಲ್ಲದ ಮಿಶ್ರಣ ಇಟ್ಟು ಉದ್ದದಲ್ಲಿ ಸುರುಳಿ ಸುತ್ತಬೇಕು. ಅಂಚುಗಳನ್ನು ಮಡಿಸಬೇಕು.
ಸುರಳಿ ಮಾಡಿಟ್ಟ ಕಡುಬನ್ನು ಇಡ್ಲಿ ಪಾತ್ರೆಯಲ್ಲಿ ೧೫-೨೦ ನಿಮಿಷ ಬೇಯಿಸಬೇಕು.
ಪಾತೋಳಿಯನ್ನು ತುಪ್ಪದ ಜೊತೆ ಸವಿಯಲು ಬಹಳ ರುಚಿಯಾಗಿರುತ್ತದೆ.
-ಸಹನಾ ಭಟ್, ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ