ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ತನ್ನದೇ ಗೊದಲದಿಂದಾಗಿ ದಿನದಿಂದ ದಿನಕ್ಕೆ ಅವನತಿಯ ಹಾದಿ ಹಿಡಿದಿರುವ ಕಾಂಗ್ರೆಸ್ ನಲ್ಲಿ ಈಗ ಮತ್ತೊಂದು ವಿವಾದ ಎದ್ದಿದೆ. ಇದು ಕಾಂಗ್ರೆಸ್ ನ್ನು ಮತ್ತೊಂದು ಮೆಟ್ಟಿಲು ಕೆಳಗಿಳಿಸುವಂತೆ ಕಾಣುತ್ತಿದೆ.
ಮಾಜಿ ಸಚಿವ, ಟ್ರಬಲ್ ಶೂಟರ್, ಕಾಂಗ್ರೆಸ್ ಪಾಲಿನ ಕಾಮಧೇನು ಎನ್ನುವಂತಿರುವ ಡಿ.ಕೆ.ಶಿವಕುಮಾರ ಜೈಲಿನಿಂದ ಹೊರಬಿದ್ದು ಬೆಂಗಳೂರಿಗೆ ಬಂದ ನಂತರದ ವಿದ್ಯಮಾನ ಆಧರಿಸಿ ಈ ವಿವಾದ ಎಬ್ಬಿಸಲಾಗಿದೆ. ಜೈಲಿಗೆ ಹೋಗಿ ಬಂದ ನಂತರವೂ ಶಿವಕುಮಾರ ಅವರಿಗಿರುವ ಬೆಂಬಲ ನೋಡಿ ದಿಗಿಲುಗೊಂಡು ಈ ವಿವಾದ ಹುಟ್ಟು ಹಾಕಲಾಗಿದೆಯೋ… ಮೊದಲಿನಿಂದಲೂ ಅವರ ಬಗೆಗೆ ಇರುವ ಆತಂಕದ ಮುಂದುವರಿದ ಭಾಗವೋ ಎನ್ನುವಂತಿದೆ ಈ ಬೆಳವಣಿಗೆ.
ಡಿ.ಕೆ.ಶಿವಕುಮಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಅವರನ್ನು ಸ್ವಾಗತಿಸಿದ್ದು, ಅಲ್ಲಿಂದ ಮೆರವಣಿಗೆ ಮೂಲಕ ನಗರಕ್ಕೆ ಕರೆತಂದಿದ್ದು ಎಲ್ಲರಿಗೂ ಗೊತ್ತಿದೆ. ಸೇರಿದ್ದವರಲ್ಲಿ ಕಾಂಗ್ರೆಸ್ ನವರೂ ಇದ್ದರೂ, ಜೆಡಿಎಸ್ ಕಾರ್ಯಕರ್ತರೂ ಇದ್ದರು. ಜೆಡಿಎಸ್ ನವರು ಅವರ ಪಕ್ಷದ ಧ್ವಜ ಹಿಡಿದು ಡಿಕೆಶಿ ಸ್ವಾಗತಕ್ಕೆ ಹೋಗಿದ್ದರು.
ಸ್ವಾಗತಿಸಿದ್ದ ಎಚ್ಡಿಕೆ
ಇದಕ್ಕೂ ಮೊದಲು ವಿಮಾನ ನಿಲ್ದಾಣದಲ್ಲಿಯೇ ಇದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಿವಕುಮಾರ ಅವರನ್ನು ಆಲಂಗಿಸಿ ಸ್ವಾಗತಿಸಿದ್ದಾರೆ. ನಂತರ ಡಿ.ಕೆ.ಶಿವಕುಮಾರ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಆ ಸಂದರ್ಭದಲ್ಲಿ ಜೆಡಿಎಸ್ ಅಭಿಮಾನಿಯೊರ್ವ ಡಿಕೆಶಿ ಕೈಗೆ ಜೆಡಿಎಸ್ ಭಾವುಟ ನೀಡಿದ್ದಾನೆ. ಶಿವಕುಮಾರ ಅದನ್ನು ಎತ್ತಿ ಹಿಡಿದಿದ್ದಾರೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಈ ಘಟನೆಯನ್ನು ಆಧರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೆದುರು ಆಡಿದ ಮಾತುಗಳು ದೊಡ್ಡ ವಿವಾದ ಹುಟ್ಟು ಹಾಕಿದೆ. ಡಿ.ಕೆ.ಶಿವಕುಮಾರ ಜೆಡಿಎಸ್ ಭಾವುಟ ಹಿಡಿಯುವುದಂದ್ರೆ ಏನು? ನಾನು ನಿನ್ನೆ ಗದಗದಲ್ಲಿಯೇ ಹೇಳಿದ್ದೇನೆ. ಇನ್ನು ಮುಂದೆ ಡಿ.ಕೆ.ಶಿವಕುಮಾರ ಸಹವಾಸ ಸಾಕು ಎಂದು… ಎಂದೆಲ್ಲ ಸಿದ್ದರಾಮಯ್ಯ ಹೇಳಿರುವ ವೀಡಿಯೋ ವೈರಲ್ ಆಗಿದೆ. ಅವರ ಜೊತೆಗಿದ್ದ ಕಾಂಗ್ರೆಸ್ ಮುಖಂಡರಿಬ್ಬರೂ ಇದಕ್ಕೆ ಧ್ವನಿಗೂಡಿಸಿದ್ದಾರೆ.
ಹಾಗೆಲ್ಲ ಮಾತನಾಡುವುದಿಲ್ಲ
ಡಿ.ಕೆ.ಶಿವಕುಮಾರ ಮೇಲಿನ ಸಿದ್ದರಾಮಯ್ಯ ಅವರ ಆಕ್ರೋಶದ ವೀಡಿಯೋ ಸಹ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ, ಅಭಿಮಾನದಿಂದ ಸಾವಿರಾರು ಜನರು ಅಲ್ಲಿ ಸೇರಿದ್ದರು. ಆ ಸಂದರ್ಭದಲ್ಲಿ ಯಾರಿಗೂ ಬೇಡ ಎನ್ನಲು ಆಗುವುದಿಲ್ಲ. ನಾನು ಜೈಲಿನಲ್ಲಿದ್ದಾಗಲೂ ಪಕ್ಷಭೇದ ಮರೆತು ಹಲವರು ಬಂದು ಭೇಟಿ ಮಾಡಿದ್ದಾರೆ. ಇದೇನು ಪಕ್ಷದ ಕಾರ್ಯಕ್ರಮವಾಗಿರಲಿಲ್ಲ. ಅವರು ಅಭಿಮಾನದಿಂದ ಧ್ವಜ ನೀಡಿದಾಗ ನಾನು ಹಿಡಿದಿರಬಹುದು. ಸಿದ್ದರಾಮಯ್ಯ ಬಹಳ ಹಿರಿಯರು. ಅವರು ಹಾಗೆಲ್ಲ ಮಾತನಾಡುವುದಿಲ್ಲ ಎಂದಿದ್ದಾರೆ.
ವಿಶೇಷ ಎಂದರೆ, ಡಿ.ಕೆ.ಶಿವಕುಮಾರ ಜೈಲು ಸೇರಿದಾಗ ಕಾಂಗ್ರೆಸ್ ಮುಖಂಡರಿಗಿಂತ ಮುಂದಾಗಿ ಜೆಡಿಎಸ್ ನಾಯಕರೇ ಪ್ರತಿಕ್ರಿಯಿಸಿದ್ದರು. ಶಿವಕುಮಾರ ಬಗೆಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು. ಜೆಡಿಸ್ ವರಿಷ್ಠ ದೇವೇಗೌಡ 2-3 ಬಾರಿ ದೆಹಲಿವರೆಗೂ ಹೋಗಿ ಬಂದಿದ್ದಾರೆ. ಕುಮಾರಸ್ವಾಮಿ ಜೈಲಿಗೆ ಹೋಗಿ ಭೇಟಿಯಾಗಿ ಬಂದಿದ್ದಾರೆ.
ಇನ್ನಷ್ಟು ಕೆರಳಿಸಿದೆ
ಸಮ್ಮಿಶ್ರ ಸರಕಾರ ಅಸ್ಥಿತ್ವದಲ್ಲಿದ್ದಾಗಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶಿವಕುಮಾರ ಹತ್ತಿರವಾಗಿದ್ದರು. ಹಲವು ಬಾರಿ ಸಂಕಷ್ಟದಿಂದ ಸರಕಾರವನ್ನು ಪಾರು ಮಾಡಿದ್ದರು. ಆದರೆ ಸಿದ್ದರಾಮಯ್ಯಗೆ ಆಗಿನಿಂದಲೂ ಶಿವಕುಮಾರ ಅವರೆಂದರೆ ಅಷ್ಟಕ್ಕಷ್ಟೆ. ಹಾಗಾಗಿ ಅವರ ಈಗಿನ ಹೇಳಿಕೆ ಶಿವಕುಮಾರ ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿದೆ.
ಕಾಂಗ್ರೆಸ್ ಹೈಕಮಾಂಡ್ ಈ ವಿದ್ಯಮಾನವನ್ನು ಹೇಗೆ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ. ಶಿವಕುಮಾರ ಜೈಲಿನಿಂದ ಹೊರಗೆ ಬಂದ ತಕ್ಷಣ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಇಬ್ಬರು ನಾಯಕರೂ ಶಿವಕುಮಾರ ಅವರಿಗೆ ಧೈರಯ ತುಂಬಿದ್ದಾರೆ.
ಕಾಂಗ್ರೆಸ್ ನಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವ ಇಂತಹ ವಿದ್ಯಮಾನಗಳು ಮುಂದುವರಿಯಲು ಬಿಟ್ಟರೆ ಪಕ್ಷ ಸಂಪೂರ್ಣ ನೆಲಕಚ್ಚುವುದರಲ್ಲಿ ಎರಡು ಮಾತಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ