ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗುವಲ್ಲಿ ವಿಳಂಬವಾದರೂ ಸಿಎಂ ನನ್ನ ಮೇಲೆ ವಿಶ್ವಾಸ ಇಟ್ಟು ಸಚಿವ ಸ್ಥಾನ ನೀಡಿದ್ದಾರೆ. ಉತ್ತರ ಕರ್ನಾಟಕದ ಜತೆ ಜತೆಗೆ ಅಖಂಡ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸುವೆ ಎಂದು ನೂತನ ಸಚಿವ ಉಮೇಶ ಕತ್ತಿ ಹೇಳಿದರು.
ಶುಕ್ರವಾರ ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಮಾತನಾಡಿದರು. ರಾಜ್ಯದಲ್ಲಿ ಯಡಿಯೂರಪ್ಪನರ ನೇತೃತ್ವದ ಸರಕಾರ ರಚನೆಯಾದಾಗಲೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಬೇರೆ ಬೇರೆ ಜಿಲ್ಲೆ ಹಾಗೂ ಎಲ್ಲ ಸಮುದಾಯವನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಬೇಕೆನ್ನುವ ಉದ್ದೇಶವನ್ನು ಸಿಎಂ ಯಡಿಯೂರಪ್ಪನವರು ಇಟ್ಟುಕೊಂಡಿದ್ದರು. ನನಗೆ ಸಚಿವ ಸ್ಥಾನ ಕೊಡುವಲ್ಲಿ ವಿಳಂಬ ಮಾಡಿದರೂ ನಾನು ನನ್ನ ಕ್ಷೇತ್ರದ ಕೆಲಸ ತೆಗೆದುಕೊಂಡು ಹೋದ ಸಂದರ್ಭದಲ್ಲಿ ಕೂಡಲೇ ಮಾಡಿಕೊಟ್ಟಿದ್ದಾರೆ. ಆದರೂ ಈಗ ನನಗೆ ಸಚಿವ ಸ್ಥಾನ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಸರಕಾರದಲ್ಲಿ ನನಗೆ ನೀಡುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನ್ನ ಜಿಲ್ಲೆ ಹಾಗೂ ರಾಜ್ಯಕ್ಕೆ ಉತ್ತಮ ಹೆಸರು ತಂದು ಕೊಡುವ ಕೆಲಸ ಮಾಡುತ್ತೇನೆ. ಶ್ರೀಗಳ ಆಶೀರ್ವಾದ ನನ್ನ ಮೇಲೆ ಸದಾ ಇರಬೇಕೆಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ನನ್ನ ಸಹೋದರ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗುವಲ್ಲಿ ತಡವಾದರೂ ವಿಶೇಷವಾಗಿ ಸಿಕ್ಕಿದೆ. ಶ್ರೀಗಳ ಆಶೀರ್ವಾದ, ಗೋಮಾತೆಯ ಪೂಜೆ, ಬಿಜೆಪಿ ಕೇಂದ್ರ, ನಾಯಕರು, ಕಾರ್ಯಕರ್ತರು, ಸಂಘಪರಿವಾರದವರ ಆಶೀರ್ವಾದಿಂದ ಸಚಿವ ಸ್ಥಾನ ದೊರೆತ್ತಿದೆ. ಬರುವ ದಿನಮಾನಗಳಲ್ಲಿ ಪಕ್ಷದ ವರಿಷ್ಠರು ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧ ನಿರಂತರವಾಗಿ ಚಟುವಟಿಕೆಯಿಂದ ಕೂಡಿರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶ್ರೀಗಳು ಕಿವಿ ಮಾತು ಹೇಳಿರುವುದನ್ನು ಬರುವ ದಿನಗಳಲ್ಲಿ ಆ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹೇಳಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಉತ್ತರ ಕರ್ನಾಟಕದ ಹೆಮ್ಮೆಯ ನಾಯಕ, ಈ ಭಾಗಕ್ಕೆ ಅನ್ಯಾಯವಾದಾಗ ಗಟ್ಟಿಯಾದ ಧ್ವನಿ ಎತ್ತುವ ನಾಯಕರು ಉಮೇಶ ಕತ್ತಿ ಅವರು. ಉಮೇಶ ಕತ್ತಿ ಅವರಿಗೆ ಮಕ್ಕಳಿಗಿಂತ ಹೆಚ್ಚಾಗಿ ಅವರ ಸಹೋದರ ರಮೇಶ ಕತ್ತಿ ಅವರ ಮೇಲೆ ಪ್ರೀತಿ ಜಾಸ್ತಿ. ಅಲ್ಲದೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಅವರು ಸಹೋದರನಿಗೆ ಸಚಿವ ಸ್ಥಾನ ಲಭಿಸಲಿ ಎಂದು ಹರಕೆ ಹೊತ್ತಿದ್ದರು. ಅದು ಈಗ ಸಾಕಾರಗೊಂಡಿದ್ದು ಹೆಮ್ಮೆಯ ಸಂಗತಿ ಎಂದರು.
ಬೆಳಗಾವಿ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಬಂದಿವೆ. ಅಲ್ಲದೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಹೆಚ್ಚಿರುವುದರಿಂದ ಸುವರ್ಣ ವಿಧಾನಸೌಧ ನಿರಂತರ ಚಟುವಟಿಕೆ ಇರಬೇಕು. ನೂತನ ಸಚಿವ ಉಮೇಶ ಕತ್ತಿ ಅವರಿಂದಲೇ ಹೆಚ್ಚು ಹೆಚ್ಚು ಕೆಲಸ ಈ ಕಟ್ಟಡದಲ್ಲಿ ನಡೆಯಬೇಕು. ನಮ್ಮ ಒತ್ತಾಸೆ ಇದೆ ಅದನ್ನು ನೆರವೇರಿಸಬೇಕೆಂದು ಕಿವಿ ಮಾತು ಹೇಳಿದರು.
ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಬಿಜೆಪಿ ಬಾಲ ಭವನದ ನಿರ್ದೇಶಕಿ ಲೀನಾ ಟೋಪಣ್ಣವರ, ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ, ಅಶೋಕ ಪಾಟೀಲ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ವೀರುಪಾಕ್ಷಯ್ಯ ನೀರಲಗಿಮಠ, ಬುಡಾ ಇಂಜನಿಯರ್ ಮಹಾಂತೇಶ ಹಿರೇಮಠ ಮುಖಂಡರಾದ ಚನ್ನಪ್ಪ ಗಜಬೂರು, ಸೋಮನಾಥ ಬರಕನಟ್ಟಿ, ತಮನಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ