Kannada NewsKarnataka NewsLatestPolitics

*ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ-ಭಾಷೆ ನಾಗರಿಕವಾಗಿದ್ದರೆ ಪೊಲೀಸರ ಮೇಲಿನ ಗೌರವ ಹೆಚ್ಚಾಗುತ್ತದೆ: ಸಿಎಂ.ಸಿದ್ದರಾಮಯ್ಯ*

ಜನರೇ ನಮ್ಮ ಮಾಲೀಕರು ಎನ್ನುವ ಭಾವನೆ ಎಲ್ಲಾ ಅಧಿಕಾರಿಗಳಲ್ಲೂ ಇರಬೇಕು; ಸಿಎಂ ಕಿವಿಮಾತು

ಪ್ರಗತಿವಾಹಿನಿ ಸುದ್ದಿ; ನಂಜನಗೂಡು: ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ-ಭಾಷೆ ನಾಗರಿಕವಾಗಿದ್ದರೆ ಪೊಲೀಸರ ಮೇಲಿನ ಗೌರವ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕವಲಂದೆ, ಅಂತರಸಂತೆ, ಜಯಪುರ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಹಣವಂತರು, ಬಲಾಡ್ಯರು ಈಗಲೂ ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಹಣ ಬಲದಿಂದ ಪೊಲೀಸರನ್ನು ಖರೀದಿಸಬಹುದು ಎನ್ನುವ ಭ್ರಮೆಯಲ್ಲಿರುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದರು.

ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ. ಜನರೇ ನಮ್ಮ ಮಾಲೀಕರು ಎನ್ನುವ ಭಾವನೆ ಎಲ್ಲಾ ಅಧಿಕಾರಿಗಳಲ್ಲೂ ಇರಬೇಕು ಎಂದು ಕಿವಿಮಾತು ಹೇಳಿದರು.

ನಾಗರಿಕ ಹಕ್ಕುಗಳ ರಕ್ಷಣೆ ಪೊಲೀಸ್ ಇಲಾಖೆಯ ಕರ್ತವ್ಯ. ಕಾನೂನು ಉಲ್ಲಂಘಿಸಲು ಕೆಲವರು ಚಾಪೆ ಕೆಳಗೆ ನುಸುಳುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದರು.

ಗುಪ್ತಚರ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿದ್ದರೆ ಅಪರಾಧ ಘಟಿಸುವುದಕ್ಕಿಂತ ಮೊದಲೇ ತಡೆಯುವುದು ಸಾಧ್ಯ. ಠಾಣೆಯ ಅಧಿಕಾರಿಗಳಿಗೆ ಗೊತ್ತಿಲ್ಲದೆ ಯಾವ ಕಾನೂನು ಬಾಹಿರ ಚಟುವಟಿಕೆಗಳೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಠಾಣೆಯಲ್ಲೇ ಕುಳಿತು ಮಹಜರ್ ಬರೆಯಬಾರದು. ಸ್ಥಳಕ್ಕೆ ಹೋಗಿ ಮಹಜರ್ ಮಾಡಬೇಕು ಎಂದರು.

ಚಾಳಿಬಿದ್ದ ಅಪರಾಧಿಗಳ ಮೇಲೆ ತೀವ್ರ ನಿಗಾ ಇಡಬೇಕು. ರೌಡಿಗಳ ಚಲನ ವಲನದ ಬಗ್ಗೆ ಠಾಣಾಧಿಕಾರಿಗಳಿಗೆ, ಠಾಣೆಯ ಸಿಬ್ಬಂದಿಗೆ ಮಾಹಿತಿ ಇರಬೇಕು ಎಂದು ಸೂಚಿಸಿದರು.

ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು.

ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಆಶ್ರಯ ಸಮಿತಿ ಅಧ್ಯಕ್ಷರಾದ‌ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button