*ಬೆಂಗಳೂರಿನ ಹೊರವಲಯದಲ್ಲಿ ಹೊಸ ರೋಡ್ ಗ್ರಿಡ್*: *ಮನೆ ಲೇಔಟ್ ನಿರ್ಮಾಣಕ್ಕೆ ಹೊಸ ರೂಲ್ಸ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಸುತ್ತಮುತ್ತ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಿಗೆ ಸರ್ಕಾರ ಈಗಲೇ ಭವಿಷ್ಯದ ಯೋಜನೆ ರೂಪಿಸುತ್ತಿದೆ. ರಸ್ತೆ, ನೀರು, ಒಳಚರಂಡಿ ಹಾಗೂ ಸಂಚಾರ ಸಮಸ್ಯೆಗಳು ನಗರಕ್ಕೆ ಮಾತ್ರ ಸೀಮಿತವಾಗದೆ ಹೊರವಲಯಕ್ಕೂ ವಿಸ್ತರಿಸದಂತೆ ಹೊಸ ರೋಡ್ ಗ್ರಿಡ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಹೊಸ ಅಧಿಸೂಚನೆಯಡಿ ನೂರಾರು ರಸ್ತೆಗಳನ್ನು ಗುರುತಿಸಿ, ಅವುಗಳ ಅಗಲವನ್ನೂ ಹೆಚ್ಚಿಸಲಾಗಿದೆ. ಇನ್ನು ಮುಂದೆ ಈ ರಸ್ತೆಗಳಿಗೆ ಮೀಸಲಿಟ್ಟ ಜಾಗವನ್ನು ಬಿಟ್ಟು ಮನೆ ಅಥವಾ ಲೇಔಟ್ ನಿರ್ಮಿಸಬೇಕಾಗುತ್ತದೆ. ಅಧಿಸೂಚಿತ ರಸ್ತೆ ಜಾಗದಲ್ಲಿ ನಿರ್ಮಾಣ ಮಾಡಿದರೆ ಅದು ಕಾನೂನು ಉಲ್ಲಂಘನೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಜಿಬಿಎ ವ್ಯಾಪ್ತಿಯಲ್ಲಿ ಈಗಾಗಲೇ ಸಾಕಷ್ಟು ಲೇಔಟ್‌ಗಳು ಹಾಗೂ ಮನೆಗಳು ನಿರ್ಮಾಣವಾಗಿವೆ. ಹೀಗಾಗಿ ಅಲ್ಲಿ ಹೊಸ ರಸ್ತೆಗಳನ್ನು ಗುರುತಿಸುವುದಕ್ಕಿಂತ, ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳ ಮೇಲೆ ಸರ್ಕಾರ ಗಮನಹರಿಸಿದೆ ಎಂದು ಹೇಳಿದ್ದಾರೆ.
ತಾಲೂಕು ಮತ್ತು ಹೋಬಳಿ ಕೇಂದ್ರಗಳು, ಪ್ರಮುಖ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು, ಪೆರಿಫೆರಲ್ ರಿಂಗ್ ರೋಡ್ ಹಾಗೂ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಗ್ರಿಡ್ ಮಾದರಿಯಲ್ಲಿ ಸಿಡಿಪಿ ರಸ್ತೆಗಳಾಗಿ ಅಧಿಸೂಚಿಸಲಾಗಿದೆ.
ಈ ಅಧಿಸೂಚನೆಯಲ್ಲಿ ನೂರಾರು ರಸ್ತೆಗಳನ್ನು ಸೇರಿಸಲಾಗಿದೆ. ಈ ಹಿಂದೆ ಜಿಲ್ಲಾ ಪಂಚಾಯತ್, ಪಿಡಬ್ಲ್ಯೂಡಿ ಹಾಗೂ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿದ್ದ ಹಲವು ರಸ್ತೆಗಳನ್ನು ಅಗಲೀಕರಿಸಿ ಹೊಸದಾಗಿ ನೋಟಿಫೈ ಮಾಡಲಾಗಿದೆ.
ಕೆಲವು 10 ಮೀಟರ್ ಅಗಲದ ರಸ್ತೆಗಳು 30 ಮೀಟರ್ ಹಾಗೂ 45 ಮೀಟರ್‌ಗೆ ವಿಸ್ತರಿಸಲ್ಪಟ್ಟಿವೆ. ಕೆಲವು ಪ್ರಮುಖ ರಸ್ತೆಗಳನ್ನು 90 ಮೀಟರ್ ಅಗಲದವರೆಗೂ ಗುರುತಿಸಲಾಗಿದೆ.
ಈ ರಸ್ತೆಗಳನ್ನು ಒಂದೇ ಬಾರಿಗೆ ನಿರ್ಮಿಸಲು ಸಾಧ್ಯವಿಲ್ಲ. ಸಂಪೂರ್ಣ ರಸ್ತೆ ಜಾಲ ನಿರ್ಮಾಣಕ್ಕೆ ಐದರಿಂದ ಹತ್ತು ವರ್ಷಗಳ ಕಾಲಾವಕಾಶ ಬೇಕಾಗಬಹುದು. ಆದರೆ ರಸ್ತೆ ನಿರ್ಮಾಣಕ್ಕೂ ಮುನ್ನವೇ ಅಗತ್ಯ ಜಾಗವನ್ನು ಕಾಯ್ದಿರಿಸುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಅಧಿಸೂಚಿತ ರಸ್ತೆ ಜಾಗದಲ್ಲಿ ಮನೆ ಅಥವಾ ಲೇಔಟ್ ನಿರ್ಮಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಹೊಸ ರೋಡ್ ಗ್ರಿಡ್‌ನ ಸಂಪೂರ್ಣ ಮಾಹಿತಿಯನ್ನು ಬಿಎಂಆರ್‌ಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ನಿರ್ಮಾಣ ಆರಂಭಿಸುವ ಮುನ್ನ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
ಹಳೆಯ ಹಾಗೂ ಹೊಸ ರಸ್ತೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಿಯೋ ರೂಪದಲ್ಲಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬಿಎಂಆರ್‌ಡಿಎ, ಜಿಲ್ಲಾ ಪಂಚಾಯತ್ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಜಂಟಿಯಾಗಿ ರಸ್ತೆಗಳನ್ನು ಗುರುತಿಸುವ ಕಾರ್ಯ ನಡೆಸಲಿದ್ದಾರೆ.
ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ನೋಟಿಸ್ ಬೋರ್ಡ್‌ಗಳಲ್ಲೂ ರಸ್ತೆ ವಿವರಗಳನ್ನು ಪ್ರಕಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಸೂಚಿಸಲಾಗಿದೆ. ಸಾವಿರಾರು ಕಿಲೋಮೀಟರ್ ಉದ್ದದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನ ಇಂದಿನ ಸಮಸ್ಯೆಗಳಿಂದ ಪಾಠ ಕಲಿತು ಹೊರವಲಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಕ್ರಮದ ಉದ್ದೇಶ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಕಳೆದ 25 ವರ್ಷಗಳಲ್ಲಿ ಸಮರ್ಪಕ ಪೂರ್ವಯೋಜನೆ ಇಲ್ಲದೆ ನಗರ ವಿಸ್ತರಣೆಯಾಗಿದ್ದರಿಂದ ಸಂಚಾರ, ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಗಳು ಎದುರಾಗಿವೆ ಎಂದು ಸಚಿವರು ಹೇಳಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ 110 ಹಳ್ಳಿಗಳು ಹಾಗೂ 7 ನಗರಸಭೆಗಳನ್ನು ಬೆಂಗಳೂರಿನ ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ ಆ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯ ಇರಲಿಲ್ಲ. ಶಾಶ್ವತ ಕುಡಿಯುವ ನೀರು, ಒಳಚರಂಡಿ ಹಾಗೂ ಉತ್ತಮ ರಸ್ತೆ ವ್ಯವಸ್ಥೆ ಕಲ್ಪಿಸುವುದು ಇಂದಿಗೂ ಸವಾಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಇದೀಗ ಜಿಬಿಎ ಹೊರಗಿನ ಪ್ರದೇಶಗಳಲ್ಲೂ ನಗರೀಕರಣ ವೇಗ ಪಡೆಯುತ್ತಿದೆ. ಸದ್ಯ ಜಿಬಿಎ ವ್ಯಾಪ್ತಿಯಲ್ಲಿ ಇಲ್ಲದ ಹಲವು ಪ್ರದೇಶಗಳು ಭವಿಷ್ಯದಲ್ಲಿ ಬೆಂಗಳೂರಿನ ಭಾಗವಾಗಿ ಬೆಳೆಯುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿಯೇ ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರು ನಗರೀಕರಣದ ವಿಸ್ತೀರ್ಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ರಸ್ತೆ ಜಾಲ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಮಾಸ್ಟರ್ ಪ್ಲಾನ್ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.
ಇದರ ಭಾಗವಾಗಿ ಇಡೀ ಬೆಂಗಳೂರು ನಗರ ಜಿಲ್ಲೆಯನ್ನು ಇತ್ತೀಚೆಗೆ ಬಿಡಬ್ಲ್ಯೂಎಸ್‌ಎಸ್ಬಿ ವ್ಯಾಪ್ತಿಗೆ ತರಲಾಗಿದ್ದು, ಕುಡಿಯುವ ನೀರು ಪೂರೈಕೆ ಹಾಗೂ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.
ಅದೇ ರೀತಿ ಬಿಎಂಆರ್‌ಡಿಎ ಸೇರಿದಂತೆ ವಿವಿಧ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹೊಸ ರೋಡ್ ಗ್ರಿಡ್ ಅನ್ನು ಮಾಸ್ಟರ್ ಪ್ಲಾನ್‌ನಲ್ಲಿ ಗುರುತಿಸಲಾಗಿದೆ. ಮುಂದಿನ ನಗರ ವಿಸ್ತರಣೆಗೆ ಅನುಗುಣವಾಗಿ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಈ ವ್ಯವಸ್ಥೆ ಆಧಾರವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




