Belagavi NewsBelgaum NewsKannada NewsKarnataka NewsNationalPoliticsTravel

*ಬೆಂಗಳೂರು-ಬೆಳಗಾವಿ ನಡುವೆ ಹೊಸ ವಂದೇ ಭಾರತ್ ರೈಲು: ಇದರ ವಿಶೇಷತೆ ಏನು..? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಯಾಣಿಕರ ಅನುಕೂಲ ಹಾಗೂ ಉತ್ತರ ಕರ್ನಾಟಕ ಮತ್ತು ರಾಜ್ಯ ರಾಜಧಾನಿಯ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಬೆಳಗಾವಿ ನಡುವೆ ಹೊಸ ವಂದೇ ಭಾರತ್ ರೈಲು ಸೇವೆಗಳನ್ನು (ರೈಲು ಸಂಖ್ಯೆ 26752/26751) ಪರಿಚಯಿಸುತ್ತಿದೆ. ಈ ಅರೆ-ಹೈಸ್ಪೀಡ್ ರೈಲು ಸೇವೆ ಬುಧವಾರ ಹೊರತುಪಡಿಸಿ, ವಾರದಲ್ಲಿ ಆರು ದಿನಗಳು ಸಂಚರಿಸಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 10, 2025 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಲಿದ್ದಾರೆ. 

ಉದ್ಘಾಟನೆಯ ನಂತರ, ವಿಶೇಷ ರೈಲು ಸಂಖ್ಯೆ 06575 ಕೆಎಸ್‌ಆರ್ ಬೆಂಗಳೂರು – ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ (ಒನ್‌ ವೇ), ಕೆಎಸ್‌ಆರ್ ಬೆಂಗಳೂರಿನಿಂದ 11:15 ಗಂಟೆಗೆ ಹೊರಡಲಿದೆ. ಇದು ಯಶವಂತಪುರ, ತುಮಕೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ನಿಂತು, ಅದೇ ದಿನ ರಾತ್ರಿ 8 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ.

ರೈಲು ಸಂಖ್ಯೆ 26751/26752ರ ನಿಯಮಿತ ಸೇವೆಗಳು ಆಗಸ್ಟ್ 11, 2025 ರಿಂದ ಪ್ರಾರಂಭವಾಗಲಿವೆ. ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗಾವಿಯಿಂದ ಬೆಳಗ್ಗೆ 5:20 ಗಂಟೆಗೆ ಹೊರಟು, ಮಧ್ಯಾಹ್ನ 13:50 ಗಂಟೆಗೆ ಕೆಎಸ್‌ಆರ್ ಬೆಂಗಳೂರನ್ನು ತಲುಪಲಿದೆ. 

Home add -Advt

ಮರಳಿ ಪ್ರಯಾಣಿಸುವಾಗ, ರೈಲು ಸಂಖ್ಯೆ 26752 ಕೆಎಸ್‌ಆರ್ ಬೆಂಗಳೂರು – ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ  ಮಧ್ಯಾಹ್ನ 2:20 ಗಂಟೆಗೆ ಹೊರಟು, ರಾತ್ರಿ 10:40 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ. 

ಇದು ಮಾರ್ಗಮಧ್ಯೆ ಯಶವಂತಪುರ (14:28/14:30 ಗಂಟೆ), ತುಮಕೂರು (15:03/15:05 ಗಂಟೆ), ದಾವಣಗೆರೆ (17:48/17:50 ಗಂಟೆ), ಎಸ್ಎಂಎಂ ಹಾವೇರಿ (18:48/18:50 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (20:00/20:05 ಗಂಟೆ) ಮತ್ತು ಧಾರವಾಡ (20:25/20:27 ಗಂಟೆ) ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಈ ರೈಲು 8 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 4 ಮೋಟರ್ ಕಾರ್‌ಗಳು, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್/ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್‌ಗಳು ಇರಲಿವೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ನೀಡಲಿದೆ.

ಪ್ರಯಾಣಿಕರು ಈ ಹೊಸ ಸೇವೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಟಿಕೆಟ್ ಬುಕಿಂಗ್ ಮತ್ತು ಇತರ ವಿಚಾರಣೆಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. 

Related Articles

Back to top button