
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಲ್ಕು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸಿವಿಲ್ ಇಂಜಿನಿಯರ್ ಅಂಜು ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರನಗರದಲ್ಲಿ ನಡೆದಿದೆ.
26 ವರ್ಷದ ಅಂಜು ಬಿಆರ್ ಮೃತ ಮಹಿಳೆ. ಸಿವಿಲ್ ಇಂಜಿನಿಯರಿಂಗ ಪದವಿ ಪಡೆದಿದ್ದ ಅಂಜು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾಲೇಜಿನಲ್ಲಿ ಓದುವಾಗಲೇ ಹಾಸನ ಜಿಲ್ಲೆಯ ಅರಕಲಗೋಡು ನಿವಾಸಿ ಅಂಜುಮ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಹಲವು ವರ್ಷಗಳಿಂದ ಪ್ರೀತಿಸಿದ್ದ ಜೋಡಿ, ಮನೆಯವರನ್ನೆಲ್ಲ ಒಪ್ಪಿಸಿ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.
ಆದರೆ ಇದೀಗ ಅಂಜು ಬದುಕೆ ಕೊನೆಯಾಗಿದೆ. ಅಂಜು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆ ಪೋಷಕರು ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಪತಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಜು ತನ್ನ ತಾಯಿ ಹೇಮಾವತಿಗೆ ಕರೆ ಮಾಡಿ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಳು. ಮದುವೆ ವೇಳೆ ಸಾಕಷ್ಟು ಒಡವೆ, ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದೆವು. ಇಂಜಿನಿಯರ್ ಆಗಿದ್ದರೂ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ, ಹಿಂಸಿಸುತ್ತಿದ್ದರು. ಈಗ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದು, ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಅಂಜು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
15 ದಿನಗಳ ಹಿಂದೆ ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿದ್ದಳು. ಅಲ್ಲದೇ ಮೊನ್ನೆ ಮಗಳು ಕರೆ ಮಾಡಿ ಚನ್ನಾಗಿ ಮಾತನಾಡಿದ್ದಳು ನಿನ್ನೆ ಸಂಜೆ 7 ಗಂಟೆಗೆ ಅಂಜು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದ್ದಾರೆ. ಪಕ್ಕಾ ಪ್ಲಾನ್ ಮಾಡಿ ಪತಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಸಿಡಿಲು ಬಡಿದು ರಾಜ್ಯದ ಯೋಧ ಅಸ್ಸಾಂ ನಲ್ಲಿ ಸಾವು