ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಕುರಿತಂತೆ ಟಿವಿ ಚರ್ಚೆಯಲ್ಲಿ ನಿರೂಪಕ ಮಾಡಿದ ಎಡವಟ್ಟು ಟ್ರೋಲ್ ಗೆ ಆಹಾರವಾಗಿದೆ.
ಖ್ಯಾತ ಸುದ್ದಿವಾಹಿನಿಯೊಂದರ ಪ್ರಧಾನ ಸಂಪಾದಕ, ನಿರೂಪಕ ಪ್ಯಾನೆಲ್ ನಲ್ಲಿದ್ದ ಅತಿಥಿಗಳ ಹೆಸರನ್ನು ಗೊಂದಲ ಮಾಡಿಕೊಂಡು ಯಾರಿಗೋ ಕೇಳಬೇಕಾದ ಪ್ರಶ್ನೆಯನ್ನು ಮತ್ಯಾರಿಗೋ ಕೇಳಿ ಅವರ ಮೇಲೆ ಎಗರಾಡಿರುವ ಘಟನೆ ನಡೆದಿದೆ.
ಇಬ್ಬರು ಅತಿಥಿಗಳೊಂದಿಗೆ ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ಯಾನೆಲ್ ಚರ್ಚೆ ನಡೆಸಿರುವ ನಿರೂಪಕ, ಉಕ್ರೇನ್ ಅತಿಥಿ ಎಂದು ಭಾವಿಸಿ ರಷ್ಯನ್ ಅತಿಥಿಯನ್ನು ಗದರಿಸಿರುವ ಪ್ರಸಂಗ ನಡೆದಿದೆ.
ಸುಮಾರು ಎರಡು ನಿಮಿಷಗಳ ಕಾಲ ನಿರೂಪಕ ರಷ್ಯನ್ ಅತಿಥಿಯ ಮೇಲೆ ಕೂಗಾಡಿದ ಬಳಿಕ ಎರಡು ನಿಮಿಷಗಳ ಕಾಲ ಮೌನವಾಗಿ ಕುಳಿತ ರಷ್ಯನ್ ಅತಿಥಿ ಕೊನೆಗೂ ನಿರೂಪಕರನ್ನು ತರಾಟೆಗೆ ತೆಗದುಕೊಂಡಿದ್ದು, ನಾನು ಇದುವರೆಗೂ ಏನೂ ಮಾತನಾಡೇ ಇಲ್ಲ. ಆದರೆ ನನ್ನ ಹೆಸರು ಕೂಗಿ ಯಾಕೆ ಎಗರಾಡ್ತಿದ್ದೀರ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಆಗಿರುವ ಪ್ರಮಾದ ತಿಳಿದ ನಿರೂಪಕ ತಕ್ಷಣವೇ ಕ್ಷಮೆ ಕೇಳಿ ತನಗಾದ ಗೊಂದಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಈ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿದೆ.
ಈ ಘಟನೆಗೆ ಟಿವಿ ಚಾನೆಲ್ ಡೆಸ್ಕ್ ನಲ್ಲಿದ್ದ ಸಿಬ್ಬಂದಿ ಮಾಡಿದ್ದ ಪ್ರಮಾದ ಕಾರಣ ಎನ್ನಲಾಗಿದ್ದು, ಪರದೆ ಮೇಲೆ ರಷ್ಯನ್ ಅತಿಥಿ ಹಾಗೂ ಉಕ್ರೇನ್ ಅತಿಥಿಯ ಹೆಸರುಗಳು ಅದಲು ಬದಲಾಗಿದ್ದು, ಈ ಗೊಂದಲಕ್ಕೆ ಕಾರಣ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ