ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ನಾಳೆ ಬೆಳಿಗ್ಗೆ ಗಲ್ಲುಶಿಕ್ಷೆ ವಿಧಿಸುವುದು ಖಚಿತವಾಗಿದೆ. ನಾಳೆ ಬೆಳಿಗ್ಗೆ 5:30ಕ್ಕೆ ಅಪರಾಧಿಗಳನ್ನು ನೇಣಿಗೇರಿಸಬಹುದಾಗಿದೆ ಎಂದು ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ತಿಳಿಸಿದೆ.
ನಿರ್ಭಯಾ ಅಪರಾಧಿಗಳು ಮಾರ್ಚ್ 20ರಂದು ನಿಗದಿಯಾಗಿದ್ದ ಗಲ್ಲು ಶಿಕ್ಷೆಗೆ ತಡೆ ಕೋರಿ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಧರ್ಮೇಂದ್ರ ರಾಣಾ ನೇತೃತ್ವದ ಪೀಠ, ಅಪರಾಧಿಗಳ ಎಲ್ಲ ಬಗೆಯ ಕಾನೂನು ಹೋರಾಟ ಅಂತ್ಯವಾಗಿದೆ. ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಹೀಗಾಗಿ ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದಕ್ಕೂ ಮುನ್ನ ರಾಷ್ಟ್ರಪತಿಗಳು ಕ್ಷಮದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ದೋಷಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದಲ್ಲದೇ ದೋಷಿ ಪವನ್ ಗುಪ್ತಾ, ಅಕ್ಷಯ್ ಠಾಕೂರ್ ಎರಡನೇ ಬಾರಿ ಕ್ಷಮದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ವಜಾ ಮಾಡಿದ್ದರು.
ನಾಲ್ವರು ಅಪರಾಧಿಗಳಾದ ಮುಕೇಶ್ ಸಿಂಗ್(32), ಪವನ್ ಗುಪ್ತ(25), ವಿನಯ್ ಶರ್ಮಾ(26) ಮತ್ತು ಅಕ್ಷಯ್ ಠಾಕೂರ್(31) ಕಾನೂನು ಹೋರಾಟ ಬಹುತೇಕ ಅಂತ್ಯವಾಗಿದ್ದು ನಾಳೆ ಬೆಳಗ್ಗೆ 5:30 ಗಲ್ಲು ಶಿಕ್ಷೆ ವಿಧಿಸುವುದು ಖಚಿತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ