
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸತ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಕೊರೊನಾ ಮಹಾಮಾರಿ ನಡುವೆ ಈ ಬಜೆಟ್ ತಯಾರಿ ನಡೆದಿದೆ. ಕೊರೊನಾದಿಂದಾಗಿ ನಮ್ಮ ದೇಶದಲ್ಲಿ ಹಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಕೊರೊನಾ ವಿರುದ್ಧದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ಕಲೆದ ಮೇ ತಿಂಗಳಲ್ಲಿ ಮೂರು ಬಾರಿ ಆತ್ಮ ನಿರ್ಭರ ಭಾರತ್ ಪ್ಯಾಕೇಜ್ ಘೋಷಿಸಲಾಯಿತು. ಜಿಡಿಪಿಯ ಶೇ.13ರಷ್ಟು ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಲಾಯಿತು. ಕಠಿಣ ಪರಿಸ್ಥಿತಿಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಲಾಕ್ ಡೌನ್ ಜಾರಿಮಾಡದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಲಾಕ್ ಡೌನ್ ಬಳಿಕ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಗೋಷಣೆ ಮಾಡಲಾಯಿತು.
ಬಡವರು, ದಲಿತರು, ಹಿರಿಯರು, ವಲಸೆ ಕಾರ್ಮಿಕರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ ಎಂಬುದನ್ನು ಈಗಾಗಲೇ ಸರ್ಕಾರ ತೋರಿಸಿದೆ. ಕೃಷಿ ಮತ್ತು ಕಾರ್ಮಿಕ ಕಾಯ್ದೆಗಳಲ್ಲಿ ಬದಲಾವಣೆ, ಏಕರೂಪದ ಪಡಿತರ ಚೀಟಿ ವಿತರಣೆ, ತೆರಿಗೆ ಕಾಯ್ದೆಯಲ್ಲಿ ಸುಧಾರಣೆ ನಮ್ಮ ನಿಲುವನ್ನು ಎತ್ತಿ ತೋರಿಸಿದೆ. ಭಾರತದಲ್ಲಿ ಇನ್ನೂ ಎರಡು ನೂತನ ಕೊರೊನಾ ಲಸಿಕೆ ವಿತರಣೆ ಆರಂಭವಾಗಲಿದೆ. ಕೋವಿಡ್ ನಿರ್ವಹಣೆಯಲ್ಲಿ ಭಾರತ ಯಶಸ್ಸು ಕಂಡಿದೆ. ಎರಡು ಮಹಾಯುದ್ಧಗಳ ನಂತರ ಜಗತ್ತು ಬದಲಾಗುವ ರೀತಿಯಲ್ಲಿ ಕೋವಿಡ್-19 ನಂತರ ಜಗತ್ತು ವೇಗವಾಗಿ ಬದಲಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಬಜೆಟ್ ನಲ್ಲಿ 6 ಮುಖ್ಯ ಆಧಾರ ಸ್ತಂಭಗಳಿದ್ದು, ಆರೋಗ್ಯ, ಬೌತಿಕ ಮತ್ತು ಹಣಕಾಸು ಬಂಡವಾಳ ಹಾಗೂ ಮೂಲ ಸೌಕರ್ಯ, ಅಭಿವೃದ್ಧಿ, ಮಾನವ ಸಂಪನ್ಮೂಲ, ಆವಿಷ್ಕಾರ-ಶಂಶೋಧನೆ-ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಎಂದು ಗುರುತಿಸಿದ್ದೇವೆ ಎಂದರು.
ಬಜೆಟ್ ಪ್ರಮುಖಾಂಶಗಳು:
* ಸ್ವಚ್ಛ ಭಾರತ್ ಮತ್ತು ಸ್ವಸ್ಥ ಭಾರತ್ ಗೆ ಆದ್ಯತೆ
* ನಗರಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ 2 ಲಕ್ಷ 80 ಸಾವಿರ ಕೋಟಿ ಘೋಷಣೆ
* ಸ್ವಚ್ಛ ನಗರಗಳಿಗಾಗಿ 141,678 ಕೋಟಿ ಮುಂದಿನ 5 ವರ್ಷಗಳಲ್ಲಿ ಖರ್ಚು ಮಾಡಲು ನಿರ್ಧಾರ
* ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ವೈಯಕ್ತಿಕ ವಾಹನಗಳಿಗೆ 20 ವರ್ಷ ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷ ಬಳಕೆ ಮಿತಿ
* ಆರೋಗ್ಯಕ್ಕಾಗಿ 2.23.846 ಕೋಟಿ ಖರ್ಚು ಮಾಡಲು ನಿರ್ಧಾರ