ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹದಗೆಟ್ಟಿರುವ ದೇಶದ ಆರ್ಥಿಕತೆ ಅಭಿವೃದ್ಧಿಗೆ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಈ ಪ್ಯಾಕೇಜ್ ಹೇಗಿರಲಿದೆ ಎನ್ನುವ ಕುರಿತು ಸುದೀರ್ಘವಾಗಿ ವಿವರಿಸಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಈ ಪ್ಯಾಕೇಜ್ ನಿಂದ ಸಿಂಹಪಾಲು ಸಿಗಲಿದ್ದು, ಉದ್ಯೋಗಿಗಳಿಗೆ ಸಂಬಳ ನೀಡುವುದಕ್ಕೂ ನೆರವು ನೀಡಲಿದೆ. ಸಣ್ಣ ಕೈಗಾರಿಕೆಗಳು ಯಾವುದೇ ಅಡಮಾನವಿಲ್ಲದೆ ಸಾಲಪಡೆಯಬಹುದು. 4 ವರ್ಷಗಳ ಸುದೀರ್ಘ ಸಾಲ ನೀಡುವ ಉದ್ದೇಶ ಹೊಂದಲಾಗಿದ್ದು, ಮೊದಲ ವರ್ಷ ಮರುಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.
ಗೃಹಸಾಲ ನೀಡುವ ಕಂಪನಿಗಳಿಗೆ, ಬ್ಯಾಂಕೇತರ ಕಂಪನಿಗಳಿಗೆ, ಸಣ್ಣ ಸಾಲ ನೀಡುವ ಸಂಸ್ಥೆಗಳಿಗೆ ಸಹ ಕೇಂದ್ರ ನೆರವು ನೀಡಲಿದೆ. ನೌಕರರ ಇಪಿಎಫ್ ನ್ನು ಶೇ.12ರಿಂದ 10ಕ್ಕೆ ಇಳಿಸಲಾಗಿದ್ದು, ಉಳಿದಿದ್ದನ್ನು ಕೇಂದ್ರ ಸರಕಾರವೇ ಭರಿಸಲಿದೆ. 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ತಕ್ಷಣ ಇಪಿಎಫ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಂತವರ ಇಪಿಎಫ್ ನ್ನು ಮುಂದಿನ 3 ತಿಂಗಳ ಕಾಲ ಸರಕಾರವೇ ಭರಿಸಲಿದೆ.
ಆದಾಯ ತೆರಿಗೆ ಪಾವತಿಸಲು 3 ತಿಂಗಳು ಸಮಯಾವಕಾಶ ನೀಡಲಾಗಿದ್ದು, ನವೆಂಬರ್ 31ರ ವರಗೆ ಅವಕಾಶವಿದೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ರೂ. ನೆರವು ಘೋಷಿಸಲಾಗಿದೆ. 200 ಕೋಟಿ ರೂ. ವರೆಗಿನ ಕೆಲಸಗಳಿಗೆ ಜಾಗತಿಕ ಟೆಂಡರ್ ನಿಂದ ವಿನಾಯಿತಿ ನೀಡಲಾಗಿದೆ.
ಸರಕಾರಿ ಗುತ್ತಿಗೆದಾರರಿಗೆ 6 ತಿಂಗಳ ಕಾಲ ಕಾಮಗಾರಿ ಪೂರ್ಣಗೊಳಿಸಲು ಸಮಯಾವಕಾಶ ನೀಡಲಾಗಿದೆ. ಟಿಡಿಎಸ್ ಹಾಗೂ ಟಿಸಿಎಸ್ ಗಳಿಗೆ ಮಾರ್ಚ್ 2021ರ ವರೆಗೆ ಶೇ.25ರಷಟು ರಿಯಾಯಿತಿ ನೀಡಲಾಗಿದೆ. ಕೊರೋನಾವನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಿ, ರಿಯಲ್ ಎಸ್ಟೇಟ್ ಉದ್ಯಮಕ್ಕೂ ನೆರವು ಘೋಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ