ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರವಾಹ ಅಪ್ಪಳಿಸಿ 2 ತಿಂಗಳಾಗುತ್ತ ಬಂದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಸಂತ್ರಸ್ತರ ತಾಳ್ಮೆ ಕಟ್ಟೆಯೊಡೆಯುತ್ತಿದೆ. ಮಂತ್ರಿಗಳ, ಅಧಿಕಾರಿಗಳ ಭರವಸೆಯನ್ನು ನಂಬಿ ಕಾದಿದ್ದವರು ಈಗ ಪ್ರತಿಭಟನೆಗಿಳಿದಿದ್ದಾರೆ. ಸರಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಸೋಮವಾರ ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದಂತೆ ತಹಸಿಲ್ದಾರ ಕಚೇರಿಗೆ ಆಗಮಿಸಿದ ಜನರು ಅಲ್ಲಿಯೇ ಧರಣಿ ಕುಳಿತರು. ಕೇಳಿದಂತೆಲ್ಲ ದಾಖಲೆಗಳನ್ನು ಕೊಟ್ಟಿದ್ದೇವೆ. ದಾಖಲೆಗಳನ್ನು ನೀಡಿ ಸಾಕಾಗಿದೆ. ಆದರೆ ಒಂದು ಪೈಸೆ ಪರಿಹಾರವೂ ಬಂದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಕಿಡಿಕಾರಿದರು. ರೊಚ್ಚಿಗೆದ್ದ ಬೆಂಡಿಗೇರಿ ಗ್ರಾಮದ ಮಹಿಳೆಯರು ಬೆಳಗಾವಿ ತಹಶಿಲ್ದಾರ ಕಚೇರಿ ಒಳಗಡೆ ಕುಳಿತು ಪರಿಹಾರ ನಿಡುವಂತೆ ಪ್ರತಿಭಟನೆ ನಡೆಸಿದರು.
ಸುಮಾರು 20 ಕ್ಕೂ ಹೆಚ್ಚು ಮಹಿಳೆಯರು ತ್ವರಿತ ಪರಿಹಾರ ನೀಡುವಂತೆ ತಹಶಿಲ್ದಾರರ ಕಛೇರಿಗೆ ತಮ್ಮ ಸಂಕಷ್ಟವನ್ನು ಹೇಳಲು ಬಂದಿದ್ದರು. ಆಗ ತಹಶಿಲ್ದಾರರು ಕಛೇರಿಯಲ್ಲಿರದ ಕಾರಣ ಉಪ ತಹಶಿಲ್ದಾರ ಕೊಠಡಿಗೆ ನುಗ್ಗಿ ನೆಲದ ಮೇಲೆಯೇ ಕುಳಿತು ಕಣ್ಣೀರಿಡುತ್ತ ತಮ್ಮ ಸಂಕಷ್ಟವನ್ನು ತೊಡಿಕೊಂಡ ದೃಶ್ಯ ಕಂಡು ಬಂತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ