*2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ: ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಆದೇಶ*

ಪ್ರಗತಿವಾಹಿನಿ ಸುದ್ದಿ: ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕೆಮ್ಮಿನ ಸಿರಪ್ ನೀಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಶೀತ ಹಾಗೂ ಕೆಮ್ಮಿಗೆ ನೀಡಿದ್ದ ಸಿರಪ್ ನಿಂದಾಗಿ ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ 11 ಮಕ್ಕಳು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಎಲ್ಲಾ ರಾಜ್ಯಗಳಿಗೂ ಖಡಕ್ ಸೂಚನೆ ನೀಡಿದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು, ಶೀತಗಳ ಸಿರಪ್ ನೀಡುವಂತಿಲ್ಲ. ಸಿರಪ್ ಸೇವಿಸದೆಯೂ ಮಕ್ಕಳಲ್ಲಿ ಕೆಮ್ಮು ಕ್ರಮೇಣ ಕಡಿಮೆಯಾಗುತ್ತದೆ. ಕೆಮ್ಮಿನ ಸಿರಪ್ ಮಾದರಿಗಳ ಪರೀಕ್ಷೆಗಳು ಡೈಥಿಲೀನ್ ಗ್ಲೈಕಾಲ್ ಅಥವಾ ಎಥಿಲಿನ್ ಗ್ಲೈಕಾಲ್ ನ್ನು ಒಳಗೊಂಡಿಲ್ಲ. ಇದು ಗಂಭೀರವಾದ ಕಿಡ್ನಿ ಸಮಸ್ಯೆಯನ್ನು ಉಂಟುಮಾಡುವ ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ ಎಂದು ತಿಳಿಸಿದೆ.
ಎರಡು ವರ್ಷಗಳ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ. ಇವುಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವೈದ್ಯರು ಶಿಫಾರಸು ಮಾಡಬಾರದು. 5ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸೂಕ್ತ ಡೋಸೆಜ್ ಗೆ ಅನುಗುಣವಾಗಿ ಶಿಫಾರಸು ಮಾಡಬೇಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಸುನಿತಾ ಶರ್ಮಾ ಎಲ್ಲಾ ರಾಜ್ಯಗಳಿಗೂ ಸೂಚಿಸಿದ್ದಾರೆ.