
ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: “ನಮ್ಮದು ಅಭಿವೃದ್ಧಿಯ ಅಜೆಂಡಾ ಆದರೆ ಕಾಂಗ್ರೆಸ್ ನವರದ್ದು ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದೇ ಅಜೆಂಡಾ” ಎಂದು ಮುರುಗೇಶ ನಿರಾಣಿ ಹೇಳಿದರು.

ಜಲಗೇರಿ ತಾಂಡಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಕಳೆದ 5 ವರ್ಷಗಳಲ್ಲಿ ಎಲ್ಲ ವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಾಚರಣೆ ನಡೆಸಲಾಗಿದೆ. ಹೀಗಾಗಿ ರೈತರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಎಲ್ಲರ ಶ್ರೇಯೋಭಿವೃದ್ದಿಯ ಕೆಲಸಗಳು ಬೀಳಗಿ ಮತಕ್ಷೇತ್ರದಲ್ಲಿ ನಡೆದಿವೆ. ಹೀಗಾಗಿ ಈ ಬಾರಿ ನನಗೆ ಅಭೂತಪೂರ್ವ ಜನಾಶಿರ್ವಾದ ದೊರಕುವ ವಿಶ್ವಾಸವಿದೆ” ಎಂದು ಹೇಳಿದರು.
“ಬಿಜೆಪಿ ಎಲ್ಲರ ಹಿತ ಬಯಸುವ ಪಕ್ಷ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮ ತತ್ವ, ದಲಿತರ ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿಲ್ಲ, ಅದು ಕಾಂಗ್ರೆಸ್ ಸೃಷ್ಟಿ. ವಾಸ್ತವತೆ ಅರಿತಾಗ ಸತ್ಯ ಗೊತ್ತಾಗುತ್ತದೆ. ಸಮಾಜಕ್ಕೆ ತಪ್ಪು ತಿಳಿವಳಿಕೆ ಬೇಡ” ಎಂದು ಹೇಳಿದರು.
“ಕಳೆದ 20 ವರ್ಷಗಳಲ್ಲಿ 3 ಅವಧಿಯಲ್ಲಿ ನನಗೆ ದೊರೆತ ಅವಕಾಶವನ್ನು ಬಳಸಿಕೊಂಡು ಫಲವಾಗಿ ಬೀಳಗಿ ಮತಕ್ಷೇತ್ರದ ಸಂಪೂರ್ಣ ಚಿತ್ರಣ ಸಂಪೂರ್ಣ ಬದಲಾಗಿದೆ. 2013-18ರ ಅವಧಿಯಲ್ಲಿ ಕಾಂಗ್ರೇಸ್ ಶಾಸಕರು 5 ವರ್ಷ ಟೈಂಪಾಸ್ ಮಾಡಿದ್ದನ್ನು ಜನತೆ ನೋಡಿದ್ದಾರೆ. ಕಾಂಗ್ರೆಸ್‌ನವರಿಗೆ ಜನರ ಬಗ್ಗೆ ಅಂತಃಕರಣ ಇಲ್ಲ. ಅವರು ಬಡವರು, ಹಿಂದುಳಿದವರು ಮತ್ತು ದಲಿತರನ್ನು ಓಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಜನ ಪ್ರಜ್ಞಾವಂತರಾಗಿದ್ದಾರೆ. ಇನ್ನು ಅವರ ಆಟ ನಡೆಯಲ್ಲ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರುತ್ತಿರುವುದನ್ನು ನೋಡಿ ನಮ್ಮ ಎದುರಾಳಿ ಕಂಗಾಲಾಗಿದ್ದಾರೆ ಎಂದು ಕುಟುಕಿದರು”

“ಮತಕ್ಷೇತ್ರದಲ್ಲಿ ಪ್ರತಿ ಕುಟುಂಬಕ್ಕೂ ನೀರು, ಸೂರು ಹಾಗೂ ವಿದ್ಯುತ್ ನೀಡಿದ್ದೇವೆ. ಪ್ರತಿ ಮಗುವಿಗೂ ಶಿಕ್ಷಣ, ರೈತನ ಜಮೀನಿಗೆ ನೀರು, ಹಗಲು ವೇಳೆ 7 ಗಂಟೆ ತ್ರಿಫೇಸ್ ವಿದ್ಯುತ್ ದೊರಕಿದೆ. ಇವೆಲ್ಲವುಗಳನ್ನು ಅರಿತು ಜನ ಬಿಜೆಪಿ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ನ್ನು ದೂರವಿಟ್ಟು ದೇಶ, ಧರ್ಮ ಹಾಗೂ ನಾಡಿನ ಉದ್ಧಾರಕ್ಕಾಗಿ ದುಡಿಯುವ ಬಿಜೆಪಿಗೆ ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮುರುಗೇಶ ನಿರಾಣಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಹೂವಪ್ಪ ರಾಠೋಡ್, ಮಲ್ಲಿಕಾರ್ಜುನ ಅಂಗಡಿ, ಮೌಲಾಸಾಬ ಕೆರೂರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ