Kannada NewsKarnataka NewsLatest

ಮುಗಳಖೋಡ: ವರುಣನ ಆರ್ಭಟಕ್ಕೆ ತತ್ತರಿಸುತ್ತಿದೆ ಅಲೆಮಾರಿ ಕುಟುಂಬದ ಬದುಕು; ಬಟ್ಟೆಯ ಜೋಪಡಿಯಲ್ಲಿ ಬದುಕು ಮೂರಾಬಟ್ಟೆ

ಸಂತೋಷ ಮುಗಳಿ , ಮುಗಳಖೋಡ : ವೋಟರ್ ಐಡಿ ಇಲ್ಲ, ಆಧಾರ್ ಕಾರ್ಡ್ ಇಲ್ಲ,  ಪಡಿತರ ಚೀಟಿಯೂ ಇಲ್ಲ. 20 ವರ್ಷಗಳಿಂದ ಸರಕಾರಿ ಯೋಜನೆಗಳಿಂದ ವಂಚಿತವಾಗಿರುವ  ಪಟ್ಟಣದ ವಾರ್ಡ್ ಸಂಖ್ಯೆ 6ರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಒಂದು ಚಿಕ್ಕ ಬಟ್ಟೆಯ ಶೆಡ್ ಹಾಕಿಕೊಂಡು ಜೀವನ ಸಾಗಿಸುತ್ತಿರುವ ಈ ಅಲೆಮಾರಿ ಕುಟುಂಬಕ್ಕೆ ಆಸರೆಯಾಗುವವರು ಯಾರು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. 

ಮೂಲತಃ ಬಾದಾಮಿ ಪಟ್ಟಣದ ಈ ಕುಟುಂಬದವರು ಮುಗಳಖೋಡ ಪಟ್ಟಣಕ್ಕೆ ಬಂದು ಸುಮಾರು 20 ವರ್ಷಗಳು ಕಳೆದಿವೆ. ಜೀವನೋಪಾಯಕ್ಕಾಗಿ, ಪ್ಲಾಸ್ಟಿಕ್ ಹಾಗೂ ಕೂದಲನ್ನು ಆಯ್ದುಕೊಂಡು ಅದರಿಂದ ಬರುವ ಅಲ್ಪಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಿರುವ ಇವರಿಗೆ ಇಲ್ಲಿಯವರೆಗೂ ಮತದಾನ ಗುರುತಿನ ಚೀಟಿಯಾಗಲಿ, ಆಧಾರ್ ಕಾರ್ಡ್ ಆಗಲಿ, ಬಹು ಮುಖ್ಯವಾಗಿ ಅತ್ಯವಶ್ಯಕವಾಗಿರುವ ಪಡಿತರ ಚೀಟಿಯ ಬಗ್ಗೆ ಯಾರೂ ಗಮನಹರಿಸಿಲ್ಲ. ಅದೆಷ್ಟೋ ಬಾರಿ ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೂ  ತಿರಸ್ಕೃತವಾಗಿದೆ  ಎಂದು ಈ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.

ಬಟ್ಟೆಯ ಜೋಪಡಿ ಇತರ ಸಂದರ್ಭಗಳಲ್ಲಿ ಆಶ್ರಯವಾದರೂ ಇದೀಗ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯಲ್ಲಿ ಇವರ ಬದುಕು ಅಯೋಮಯವಾಗಿದೆ.  ಜೋರಾಗಿ ಮಳೆ ಬಂದರೆ ಸಾಕು, ಜೋಪಡಿಯಲ್ಲಿ ನೀರು ಹರಿದು ಬಂದು ಅಡುಗೆ ಮಾಡಿಕೊಳ್ಳಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಪ್ರತಿ ವರ್ಷ ಮಳೆಗಾಲದಲ್ಲಿ ಇಂತಹ ಸಂಕಷ್ಟದ ಜೀವನವನ್ನು ಕಳೆದ 20 ವರ್ಷಗಳಿಂದ ಅನುಭವಿಸುತ್ತ ಬರುತ್ತಿದೆ ಈ ಕುಟುಂಬ.

ಕೆಲವು ಬಾರಿ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಿ ಹೋಗುವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇವರ ಬೇಕು ಬೇಡಗಳನ್ನು ಇಲ್ಲಿವರೆಗೂ ಕೇಳದೆ ಇರುವುದು ಈ ಕುಟುಂಬದ ದೌರ್ಭಾಗ್ಯವೇ ಸರಿ.

ಈ ಸಮಸ್ಯೆಯ ಕುರಿತು ಮುಗಳಖೋಡ ಗ್ರಾಮ ಲೆಕ್ಕಾಧಿಕಾರಿಯವರನ್ನು ಸಂಪರ್ಕ ಮಾಡಿ ವಿಚಾರಿಸಿದಾಗ, ತಕ್ಷಣ ಸ್ಪಂದನೆ ನೀಡಿರುವ ಗ್ರಾಮ ಲೆಕ್ಕಾಧಿಕಾರಿಯವರು ಕೂಡಲೇ ಈ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ಅನುಕೂಲತೆಗಳನ್ನು ಇಲಾಖೆಯ ವತಿಯಿಂದ ಮಾಡಿಕೊಡುವ ಎಂಬ ಭರವಸೆ ನೀಡಿದ್ದಾರೆ. ಇನ್ನು ಕೂಡಲೇ ಇವರಿಗೆ ಅತ್ಯವಶ್ಯಕವಾಗಿ ಬೇಕಾಗಿರುವುದು ವಸತಿ ಸೌಕರ್ಯ, ಮಳೆಗಾಲ ಮುಗಿಯುವವರೆಗೂ ಇಂತಹ ನಿರ್ಗತಿಕರಿಗೆ ಸಂಬಂಧಪಟ್ಟ ಇಲಾಖೆಯವರು ಒಂದು ಬಾಡಿಗೆ ಮನೆಯನ್ನು ಕೊಡಿಸಿ, ಆ ಮನೆಯ ಬಾಡಿಗೆ ಹಣವನ್ನು ಭರಣ ಮಾಡಿದರೆ ತುಂಬಾ ಅನುಕೂಲವಾಗುತ್ತದೆ ಎಂಬುದು ಈ ಕುಟುಂಬದವರ ಬೇಡಿಕೆಯಾಗಿದೆ.

ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಘೋಷಣೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button