ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿದ ಯೋಜನೆ ಸಂಖ್ಯೆ ೩೫+೪೩+೪೩ಎ ರಾಮತೀರ್ಥ ನಗರ, ಕಣಬರ್ಗಿ ಹಾಗೂ ಯೋಜನೆ ಸಂಖ್ಯೆ ೫೬, ಎಚ್.ಡಿ ಕುಮಾರಸ್ವಾಮಿ ವಿನ್ಯಾಸಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.
ಈ ನಿವೇಶನಗಳಲ್ಲಿ ಕಟ್ಟಡಗಳನ್ನು ನಿರ್ಮಿಸುವ ಶ್ರಮವನ್ನು ಕೈಗೊಳ್ಳಬೇಕೆಂದು, ಇಲ್ಲವಾದಲ್ಲಿ ನಿವೇಶನ ಹಂಚಿಕೆಯ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರೀತಮ ನಸಲಾಪುರೆ ತಿಳಿಸಿದ್ದಾರೆ.
ಅದರಂತೆ ನಿವೇಶನದಾರರು ಈ ಹಂಚಿಕೆಯಾದ ನಿವೇಶನಗಳಿಗೆ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರದನ್ವಯ ಪತ್ರ ನೋಂದಣಿ ಮಾಡಿಕೊಂಡಿದ್ದು, ಹಂಚಿಕೆಯಾದ ನಿವೇಶನಗಳಲ್ಲಿ ನಿಯಮಾನುಸಾರ ಕಟ್ಟಡ ನಿರ್ಮಿಸದೇ ಇರುವುದರಿಂದ ಮತ್ತು ಅಕ್ಕಪಕ್ಕದ ನಿವೇಶನದಾರರು ಈ ಹಂಚಿಕಯಾದ ಖಾಲಿಯಿರುವ ನಿವೇಶನಗಳಲ್ಲಿ ಗಿಡ-ಮರ. ಬೆಳೆದಿದ್ದು ಹಾಗೂ ಇತರ ಪ್ರಾಣಿಗಳು ಓಡಾಟದಿಂದ ತೊಂದರೆಯುಂಟಾಗುತ್ತಿದೆ ಎಂದು ಪ್ರಾಧಿಕಾರದ ಆಯುಕ್ತರಿಗೆ ದೂರಗಳನ್ನು ನೀಡುತ್ತಿದ್ದಾರೆ.
ಈ ಕುರಿತು ಈಗಾಗಲೇ ೨೦೧೭ರ ಮೇ ೮ ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ಆದರೂ ಖಾಲಿಯಿರುವ ನಿವೇಶನದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಪ್ರಾಧಿಕಾರದ ವತಿಯಿಂದ ಈ ಮೇಲಿನ ಯೋಜನೆಗಳಲ್ಲಿ ಖಾಲಿಯಿರುವ ನಿವೇಶನಗಳಲ್ಲಿಯ ಗಿಡ ಮರಗಳನ್ನು ಹಾಗೂ ಇನ್ನಿತರ ಸ್ವಚ್ಛತಾ ಕಾರ್ಯವನ್ನು ಕೈಗೊಂಡು, ಅದಕ್ಕೆ ತಗಲುವ ವೆಚ್ಚವನ್ನು ಹೆಚ್ಚುವರಿ ತೆರಿಗೆ ರೂಪದಲ್ಲಿ ಕಟ್ಟಡ ನಿರ್ಮಿಸದೇ ಖಾಲಿಯಿರುವ ನಿವೇಶಗಳ ನಿವೇಶನದಾರರಿಂದ ಭರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ