Film & EntertainmentKannada NewsKarnataka NewsLatest

*ಅಮಿತಾಭ್ ಬಚ್ಚನ್ ಹೆಸರು, ಧ್ವನಿ ಬಳಕೆಗೆ ಶಾಶ್ವತ ಬ್ರೇಕ್*: *ದೆಹಲಿ ಹೈಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಹೆಸರು, ಧ್ವನಿ ಮತ್ತು ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ ನೀಡಿದೆ. ಡಿಜಿಟಲ್ ವೇದಿಕೆಗಳಲ್ಲಿ ನಟನ ಗುರುತನ್ನು ದುರುಪಯೋಗಪಡಿಸಿಕೊಂಡು ಅಭಿಮಾನಿಗಳನ್ನು ವಂಚಿಸುವ ಪ್ರಯತ್ನಗಳಿಗೆ ಈ ಆದೇಶ ತಡೆ ನೀಡಿದೆ.

2022ರಲ್ಲಿ ಅಮಿತಾಭ್ ಬಚ್ಚನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಈ ಆದೇಶ ಹೊರಡಿಸಿದ್ದಾರೆ. ಮೊಬೈಲ್ ಆ್ಯಪ್‌ಗಳು, ವೆಬ್‌ಸೈಟ್‌ಗಳು, ಪೋಸ್ಟರ್‌ಗಳು ಮತ್ತು ರಸಪ್ರಶ್ನೆ ಪುಸ್ತಕಗಳಲ್ಲಿ ಅವರ ಹೆಸರು ಹಾಗೂ ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ಬಳಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಇದೀಗ ಶಾಶ್ವತಗೊಳಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಪ್ರಮುಖ ಸಂಸ್ಥೆಗಳು ರಾಜಿಗೆ ಮುಂದಾಗಿವೆ. ನಕಲಿ ವಿಡಿಯೋ ಕಾಲ್ ಆ್ಯಪ್, ರಸಪ್ರಶ್ನೆ ಪುಸ್ತಕ, ಪೋಸ್ಟರ್ ಮಾರಾಟಗಾರರು ಮತ್ತು ವೆಬ್‌ಸೈಟ್ ಮಾಲೀಕರು ತಮ್ಮ ತಪ್ಪನ್ನು ಒಪ್ಪಿಕೊಂಡು, ಮುಂದಿನ ದಿನಗಳಲ್ಲಿ ಅಮಿತಾಭ್ ಅವರ ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ನ್ಯಾಯಾಲಯ ಅವರಿಗೆ ದಂಡದಿಂದ ವಿನಾಯಿತಿ ನೀಡಿದೆ.

ಆದರೆ ವಿಚಾರಣೆಗೆ ಹಾಜರಾಗದ ಇತರ ನಾಲ್ವರು ಆರೋಪಿಗಳ ವಿರುದ್ಧ ನ್ಯಾಯಾಲಯ ಆದೇಶ ಹೊರಡಿಸಿದೆ. ಅಮಿತಾಭ್ ಅವರ ಗುರುತನ್ನು ಅಕ್ರಮವಾಗಿ ಬಳಸಿರುವುದು ಸ್ಪಷ್ಟವಾಗಿರುವುದರಿಂದ ಈ ವಿಚಾರದಲ್ಲಿ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಈ ಆದೇಶದ ವಿಶೇಷವೆಂದರೆ, ಗುರುತು ಪತ್ತೆಯಾಗದ ವ್ಯಕ್ತಿಗಳಿಗೂ ಇದು ಅನ್ವಯವಾಗಲಿದೆ. ‘ಜಾನ್ ಡೋ’ ನಿಯಮದಡಿ ಅನಾಮಧೇಯ ವ್ಯಕ್ತಿಗಳು ಕೂಡ ಅಮಿತಾಭ್ ಬಚ್ಚನ್ ಅವರ ಹೆಸರು, ಧ್ವನಿ ಮತ್ತು ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ಬಳಸುವುದನ್ನು ನಿರ್ಬಂಧಿಸಲಾಗಿದೆ.

ಒಟ್ಟಿನಲ್ಲಿ, ಡಿಜಿಟಲ್ ಜಗತ್ತಿನಲ್ಲಿ ಸೆಲೆಬ್ರಿಟಿಗಳ ಹೆಸರು ಮತ್ತು ಧ್ವನಿಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳ ನಡುವೆ ದೆಹಲಿ ಹೈಕೋರ್ಟ್‌ನ ಈ ಆದೇಶ ಮಹತ್ವ ಪಡೆದಿದೆ. ಅಮಿತಾಭ್ ಬಚ್ಚನ್ ಅವರ ವ್ಯಕ್ತಿತ್ವದ ಹಕ್ಕುಗಳಿಗೆ ಕಾನೂನು ರಕ್ಷಣೆ ದೊರೆತಿದೆ.

Related Articles

Back to top button